ಸಿಡ್ನಿ/ ಕೊಲಂಬೊ: ಲೈಂಗಿಕ ದೌರ್ಜನ್ಯದ ಆರೋಪದಡಿ ಆಸ್ಟ್ರೇಲಿಯಾದಲ್ಲಿ ಬಂಧನಕ್ಕೆ ಒಳಗಾಗಿರುವ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರಿಗೆ ಸಿಡ್ನಿಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಮಹಿಳೆಯೊಬ್ಬರ ಮೇಲೆ ನ.2 ರಂದು ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಡಿ ಸಿಡ್ನಿಯ ಪೊಲೀಸರು 31 ವರ್ಷದ ಧನುಷ್ಕಾ ಅವರನ್ನು ಭಾನುವಾರ ಬಂಧಿಸಿದ್ದರು. ಅವರನ್ನು ಸರೆ ಹಿಲ್ಸ್‌ನಲ್ಲಿರುವ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.
ಧನುಷ್ಕಾ ಅವರ ವಕೀಲಕರಾದ ಆನಂದ ಅಮರನಾಥ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಸಿಡ್ನಿಯ ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆ ನಡೆಯಿತು. ಮ್ಯಾಜಿಸ್ಟ್ರೇಟ್ ರಾಬರ್ಟ್ ವಿಲಿಯಮ್ಸ್ ಅವರು ಜಾಮೀನು ನಿರಾಕರಿಸಿದರು ಎಂದು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.
‘ಜಾಮೀನು ಕೋರಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು’ ಎಂದು ಅಮರನಾಥ್ ಪ್ರತಿಕ್ರಿಯಿಸಿದ್ದಾರೆ.
ಎಸ್‌ಎಲ್‌ಸಿ ಅಮಾನತು ಕ್ರಮ: ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಧನುಷ್ಕಾ ಅವರನ್ನು ಅಮಾನತು ಮಾಡಿದೆ.
‘ಧನುಷ್ಕಾ ಅವರನ್ನು ತಕ್ಷಣದಿಂದಲೇ ಕ್ರಿಕೆಟ್‌ನ ಎಲ್ಲ ಮಾದರಿಗಳಿಂದಲೂ ಅಮಾನತು ಮಾಡಲು ಎಸ್‌ಎಲ್‌ಸಿ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಅವರನ್ನು ಇನ್ನು ಮುಂದೆ ಆಯ್ಕೆಗೆ ಪರಿಗಣಿಸುವುದಿಲ್ಲ’ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
‘ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಮಂಡಳಿ ಎಲ್ಲ ಸಹಕಾರ ನೀಡಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯುವ ವಿಚಾರಣೆಯಲ್ಲಿ ಅವರ ತಪ್ಪಿತಸ್ಥ ಎಂಬುದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.