ನವದೆಹಲಿ: ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಸೋಮವಾರ ‘ಡಬಲ್‘ ಪದಕಗಳ ಸಂಭ್ರಮ. ಗ್ರೀಸ್‌ನ ಹೆರಾಕ್ಲಿಯೊನ್‌ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್ ಚಾಂಪಿಯನ್‌ಷಿಪ್‌ನ 49 ಕೆಜಿ ವಿಭಾಗದಲ್ಲಿ ಗ್ಯಾನೇಶ್ವರಿ ಯಾದವ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರೆ, ವಿ.ರಿತಿಕಾ ಕಂಚು ಕೊರಳಿಗೇರಿಸಿಕೊಂಡರು.
ಗ್ಯಾನೇಶ್ವರಿ ಒಟ್ಟು 156 ಕೆಜಿ (ಸ್ನ್ಯಾಚ್ 73 ಕೆಜಿ+ ಕ್ಲೀನ್ ಆ್ಯಂಡ್ ಜೆರ್ಕ್ 83 ಕೆಜಿ) ಭಾರ ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
49 ಕೆಜಿ ವಿಭಾಗದಲ್ಲೇ ಸ್ಪರ್ಧಿಸಿದ್ದರಿತಿಕಾ (ಒಟ್ಟು 150= 69+81) ಗ್ಯಾನೇಶ್ವರಿ ಅವರಿಗಿಂತ ಆರು ಕೆಜಿ ಕಡಿಮೆ ಭಾರ ಎತ್ತಿ ಕಂಚು ಜಯಿಸಿದರು.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಇಂಡೊನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾಹ್ ಒಟ್ಟು 185 ಕೆಜಿ (83+102) ಸಾಧನೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡರು. 49 ಕೆಜಿ ವಿಭಾಗದ ವಿಶ್ವದಾಖಲೆ ಚೀನಾದ ಜಿಯಾಂಗ್ ಹುಯಿವಾ ಹೆಸರಿನಲ್ಲಿದೆ. ಅವರು 206 ಕೆಜಿ (92+114) ಭಾರ ಎತ್ತಿದ್ದರು.
ಪ್ರಮುಖ ಸ್ಪರ್ಧಿಗಳಾದ ಚೀನಾ, ಉತ್ತರ ಕೊರಿಯಾ ಮತ್ತು ಥಾಯ್ಲೆಂಡ್ ವೇಟ್‌ಲಿಫ್ಟರ್‌ಗಳು ಇಲ್ಲಿ ಕಣಕ್ಕಿಳಿದಿರಲಿಲ್ಲ.
ಇದೇ ವಿಭಾಗದಲ್ಲಿ ಮೀರಾಬಾಯಿ ಚಾನು 202 ಕೆಜಿ ಸಾಧನೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಎರಡು ಪದಕಗಳೊಂದಿಗೆ ಭಾರತ ಮಡಿಲು ಸೇರಿದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಹರ್ಷದಾ ಶರದ್ ಗರುಡ್ ಸೋಮವಾರವೇ ಚಿನ್ನದ ಪದಕ ಜಯಿಸಿದ್ದರು.
ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಐಡಬ್ಲ್ಯುಎಫ್ ಟೂರ್ನಿಗಳಲ್ಲಿ ಸ್ಪರ್ಧಿಸಲು ರಷ್ಯಾ ಮತ್ತು ಬೆರಾರೂಸ್ ಅಥ್ಲೀಟ್‌ಗಳಿಗೆ ಅವಕಾಶ ನೀಡಿಲ್ಲ. ಕಳೆದ ಆವೃತ್ತಿಯಲ್ಲಿ ರಷ್ಯಾ (9) ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.