ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮಂಗಳವಾಡ ಗ್ರಾಮದಲ್ಲಿ ಜನವರಿ ಮೊದಲ ವಾರ ರಾಜ್ಯಮಟ್ಟದ ಕುಸ್ತಿ ಹಬ್ಬ ನಡೆಯಿತು. 180ಕ್ಕೂ ಹೆಚ್ಚು ಪೈಲ್ವಾನರು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ಹಳಿಯಾಳ ಮತ್ತು ನೆರೆಯ ತಾಲ್ಲೂಕಿನವರೇ.
ಸ್ಪರ್ಧೆಯ ನಂತರ ತಾಲ್ಲೂಕಿನ ಹಳ್ಳಿಗಳಲ್ಲಿ ಕುಸ್ತಿ ಕ್ರಾಂತಿಯಾಗಿದೆ. ಅನೇಕ ವರ್ಷಗಳಿಂದ ಮುಚ್ಚಿದ್ದ 15ರಷ್ಟು ಗರಡಿಗಳಲ್ಲಿ ತಾಲೀಮು ಆರಂಭಗೊಂಡಿದೆ.
‘ಉತ್ತರ ಕರ್ನಾಟಕದ ಕುಸ್ತಿ ಕೇಂದ್ರಗಳಲ್ಲಿ ಒಂದು ಎಂದೇ ಹೇಳಲಾಗುವ ಹಳಿಯಾಳದಲ್ಲಿ ಕೆಲವು ವರ್ಷಗಳ ಹಿಂದೆ ಪೈಲ್ವಾನರು ಇಲ್ಲದ ಮನೆಯೇ ಇಲ್ಲ ಎಂಬ ಮಾತು ಕೇಳಿಬರುತ್ತಿತ್ತು’ ಎಂದು ಸ್ಥಳೀಯ ಮುಖಂಡರು ಹೇಳುತ್ತಾರೆ. ಮ್ಯಾಟ್ ಕುಸ್ತಿಗೆ ಮಾರು ಹೋಗಿರುವ ಯುವ ತಲೆಮಾರು ಅಭ್ಯಾಸ ಮಾಡಲು ತಾಲ್ಲೂಕು ಕೇಂದ್ರಕ್ಕೆ ಹೋಗಲು ಶುರು ಮಾಡುವುದರೊಂದಿಗೆ ಹಳ್ಳಿಗಳ ಮಣ್ಣಿನ ಗರಡಿಗಳು ಮುಚ್ಚತೊಡಗಿದವು.
‘ಕುಸ್ತಿಹಬ್ಬ’ದಲ್ಲಿ ಈ ಗರಡಿಗಳಿಗೆ ಮರುಜೀವ ನೀಡುವ ಉದ್ದೇಶವೂ ಇತ್ತು. ಆಯೋಜಕರ ಈ ಉದ್ದೇಶ ಈಗ ಈಡೇರಿದೆ. ‘ಹಬ್ಬ’ದಲ್ಲಿ ಸ್ಥಳೀ ಯರು ಮತ್ತು ಹೊಸ ಪೀಳಿಗೆಯ ಪೈಲ್ವಾನರು ಹೆಚ್ಚು ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ 48 ಕೆಜಿ ವಿಭಾಗವನ್ನು ತಾಲ್ಲೂಕಿನವರಿಗೆ ಮಾತ್ರ ಮೀಸಲಿಡಲಾಗಿತ್ತು. ಈ ವಿಭಾಗದಲ್ಲಿ ಸ್ಪರ್ಧಿಸುವುದಕ್ಕಾಗಿ ’ಹಬ್ಬ’ದ ಮೊದಲೇ ಗರಡಿಗಳನ್ನು ತೆರೆದು ತಾಲೀಮು ಆರಂಭಿಸಲಾಗಿತ್ತು. ಹಬ್ಬ ಮುಗಿದ ನಂತರ ಇನ್ನಷ್ಟು ಗರಡಿಮನೆಗಳಲ್ಲಿ ‘ಬೆಳಕು’ ಮೂಡಿತು. ಸಂಪೂರ್ಣ ಮುಚ್ಚದೇ ಇದ್ದರೂ ಹೆಚ್ಚು ಚಟುವಟಿಕೆ ಇಲ್ಲದೇ ಇದ್ದ ಗರಡಿಗಳು ಚುರುಕು ಪಡೆದುಕೊಂಡವು.
ದುಸಗಿ, ಅರ್ಲವಾಡ, ಸಾತ್ನಳ್ಳಿ, ಬುಜರ ಕಂಚನಳ್ಳಿ, ಮೊದಲಗೇರಾ, ರಾಮಾಪುರ, ತಟ್ಟಿಗೇರಾ, ಜತಗಾ, ಮಂಗಳವಾಡ, ಮುರ್ಕವಾಡ, ಬೆಳವಟಗಿ, ತತ್ವಣಗಿ, ಜೋಗನಕೊಪ್ಪ, ಹುಣಸವಾಡ, ಖುರ್ದ ಕಂಚನಳ್ಳಿ ಮುಂತಾದ ಹಳ್ಳಿಗಳಲ್ಲಿ ಈಗ ನಿತ್ಯವೂ ತಾಲೀಮು ನಡೆಯುತ್ತಿದೆ.
ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ, ಹಳಿಯಾಳ ತಾಲ್ಲೂಕು ಮಾಜಿ ಪೈಲ್ವಾನರ ಸಂಘ, ಮಂಗಳವಾಡದ ಬಲಭೀಮ ವ್ಯಾಯಾಮ ಶಾಲೆ, ಶ್ರೀ ಲಕ್ಷೀ ದೇವಸ್ಥಾನ ಟ್ರಸ್ಟ್, ಹಳಿಯಾಳದ ಯುವಕ ಮಂಡಳ ಕ್ರೀಡಾ ಭವನದವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಿದ್ದರು.
‘2002 ಮತ್ತು 2004ರಲ್ಲಿ ರಾಮಾಪುರದಲ್ಲಿ ಕುಸ್ತಿ ಹಬ್ಬ ಆಯೋಜಿಸಲಾಗಿತ್ತು. ಮುಚ್ಚಿದ್ದ ಅನೇಕ ಗರಡಿಮನೆಗಳು ಆಗ ತೆರೆದಿದ್ದವು. ನಂತರ ತಾಲ್ಲೂಕಿನಲ್ಲಿ ಕುಸ್ತಿ ಚಟುವಟಿಕೆ ಕ್ಷೀಣವಾಯಿತು. ಕುಸ್ತಿಗೆ ಮರುಜೀವ ನೀಡುವ ಗುರಿ ಇರಿಸಿಕೊಂಡೇ ‘ಹಬ್ಬ’ ಆಯೋಜಿಸಲಾಗಿತ್ತು’ ಎಂದು ಮಾಜಿ ಪೈಲ್ವಾನರ ಸಂಘದ ಅಧ್ಯಕ್ಷ ಡೊಂಗ್ರು ವಾಲೇಕರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಳಿಯಾಳ, ಉತ್ತರ ಕರ್ನಾಟಕ ಭಾಗದ ಪ್ರಮುಖ ಕುಸ್ತಿಕೇಂದ್ರ. ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಮಿಂಚಿದ ಅನೇಕರು ಇಲ್ಲಿನವರು. ಉಳ್ಳವರು ಪಟ್ಟಣ, ನಗರಗಳಿಗೆ ಹೋಗಿ ಮ್ಯಾಟ್ ಕುಸ್ತಿ ಅಭ್ಯಾಸ ಮಾಡಲು ಶುರು ಮಾಡಿದ ನಂತರ ಗ್ರಾಮೀಣ ಕುಸ್ತಿಗೆ ಲಕ್ವ ಹೊಡೆದಂತಾಗಿದೆ. ಮರಿ ಪೈಲ್ವಾನರೂ ಅಖಾಡಕ್ಕೆ ಇಳಿಯಬೇಕು ಎಂಬ ಉದ್ದೇಶದಿಂದ ಕಡಿಮೆ ತೂಕದ ವಿಭಾಗವನ್ನೂ ಕುಸ್ತಿ ಹಬ್ಬದಲ್ಲಿ ಸೇರಿಸಲಾಗಿತ್ತು’ ಎಂದು ಅವರು ವಿವರಿಸಿದರು.
’ಒಂದು ದಶಕದಿಂದ ಗರಡಿಮನೆಗಳಲ್ಲಿ ಚಟುವಟಿಕೆ ಇರಲಿಲ್ಲ. ಈಗ 15ರಿಂದ 20 ಮಂದಿ ಕುಸ್ತಿಪಟುಗಳು ತಾಲೀಮಿಗೆ ಬರುತ್ತಿದ್ದಾರೆ. ಈ ಬೆಳವಣಿಗೆ ಭರವಸೆ ತುಂಬಿದೆ’ ಎಂದು ಜೋಗನಕೊಪ್ಪದ ಜಯರಾಮ ಕಳ್ಳಿಮನಿ, ಸಾತ್ನಳ್ಳಿಯ ಶಾಂತಾರಾಂ ಮತ್ತಿತರರು ಹೇಳಿದರು.
‘ಹ್ಯಾಂಡ್‌ಬಿಲ್ ಹಂಚಿದಾಗಲೇ ಲೈಟ್ ಹಚ್ಚಿದರು’
ಕುಸ್ತಿ ಹಬ್ಬದ ಹ್ಯಾಂಡ್‌ಬಿಲ್ ಹಂಚಲು ಆರಂಭಿಸಿ ಒಂದೆರಡು ದಿನಗಳಾಗುತ್ತಿದ್ದಂತೆ ಗರಡಿ ಮನೆಗಳಲ್ಲಿ ಲೈಟ್ ಹಚ್ಚಿದ್ದಾರೆ. ಅದು, ನಮಗೆ ಹುರುಪು ತುಂಬಿತು. ಶಾಲೆಯಿಂದ ವಾಪಸಾಗಿ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿದ್ದ ಹುಡುಗರು ಈಗ ಗರಡಿಮನೆಯ ಕಡೆಗೆ ಧಾವಿಸುತ್ತಿದ್ದಾರೆ. ಕುಸ್ತಿ ಜನಪ್ರಿಯವಾಗಿರುವ ಇತರ ಕಡೆಲೆಗಳಲ್ಲೂ ಇಂಥ ಪ್ರಯತ್ನಗಳು ನಡೆದರೆ ಯುವ ಜನತೆ ಕ್ರೀಡಾಕ್ಷೇತ್ರಕ್ಕೆ ಆಸ್ತಿಯಾಗಬಲ್ಲರು’ ಎಂದರು ಡೊಂಗ್ರು ವಾಲೇಕರ.
ಇದನ್ನೂ ಓದಿ:ಕಣ್ಮರೆಯಾಗುತ್ತಿರುವ ಗರಡಿ ಮನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.