ಲಂಡನ್: ವರ್ಣ ತಾರತಮ್ಯದ ವಿರುದ್ಧ ಲಂಡನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪಾಲ್ಗೊಂಡಿದ್ದಾರೆ.
ಹ್ಯಾಮಿಲ್ಟನ್ ಅವರು ಫಾರ್ಮುಲಾ ಒನ್ ಮೋಟರ್ ರೇಸ್‌ನಲ್ಲಿ ಸಕ್ರಿಯರಾಗಿರುವ ಕಪ್ಪು ಜನಾಂಗದ ಏಕೈಕ ಚಾಲಕ ಎಂಬ ಹಿರಿಮೆ ಹೊಂದಿದ್ದಾರೆ.
ಇದೇ ವರ್ಷದ ಮೇ 25ರಂದು ಮಿನ್ನೆಪೊಲಿಸ್‌ನಲ್ಲಿ ಶ್ವೇತವರ್ಣದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಎಂಬುವರು ಕಪ್ಪು ವರ್ಣೀಯ ನಾಗರಿಕ ಜಾರ್ಜ್ ಫ್ಲಾಯ್ಡ್‌ಗೆ ಕೈಕೋಳ ತೊಡಿಸಿ ಕುತ್ತಿಗೆಯ ಮೇಲೆ ಎಂಟು ನಿಮಿಷಗಳ ಕಾಲ ಮಂಡಿಯೂರಿ ನೆಲಕ್ಕೆ ಅದುಮಿ ಹಿಡಿದಿದ್ದರು. ಹೀಗಾಗಿಫ್ಲಾಯ್ಡ್ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದು ಅಮೆರಿಕದಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು.ಫ್ಲಾಯ್ಡ್ ಸಾವನ್ನು ಖಂಡಿಸಿ ವಿಶ್ವದಾದ್ಯಂತ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಹ್ಯಾಮಿಲ್ಟನ್ ಬೆಂಬಲ ಸೂಚಿಸಿದ್ದಾರೆ.
‘ಹೈಡ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಖುಷಿ ನೀಡಿತು. ಕಪ್ಪು ವರ್ಣೀಯರ ಜೊತೆ ಶ್ವೇತ ವರ್ಣೀಯರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಕಂಡು ಹೆಮ್ಮೆಯಾಯಿತು’ ಎಂದು ಹ್ಯಾಮಿಲ್ಟನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಕಪ್ಪು ಬಟ್ಟೆ ಧರಿಸಿದ್ದ ಹ್ಯಾಮಿಲ್ಟನ್, ‘ಬ್ಲಾಕ್ ಲೈವ್ಸ್ ಮ್ಯಾಟರ್’ ಬರಹವಿದ್ದ ಭಿತ್ತಿಪತ್ರವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿರುವ ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
‘ಎಲ್ಲರೂ ಒಂದೇ ಎಂಬುದು ಈ ಅಭಿಯಾನದ ಧ್ಯೇಯ. ಬದಲಾವಣೆ ಜಗದ ನಿಯಮ. ಭವಿಷ್ಯದಲ್ಲಿ ಜನರ ಮನಸ್ಥಿತಿ ಬದಲಾಗುತ್ತದೆ ಎಂಬ ಭರವಸೆ ಖಂಡಿತವಾಗಿಯೂ ಇದೆ. ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು. ಈ ಹೋರಾಟ ಹೀಗೆ ಸಾಗಲಿ’ ಎಂದು ಅವರು ಹೇಳಿದ್ದಾರೆ.
35 ವರ್ಷ ವಯಸ್ಸಿನ ಹ್ಯಾಮಿಲ್ಟನ್ ಅವರು ಫಾರ್ಮುಲಾ ಒನ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.