ನವದೆಹಲಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಒಳಗೊಂಡಂತೆ ರಾಜಕಾರಣಿಗಳು ಮತ್ತು ಕ್ರೀಡಾಪಟುಗಳು ದೇಶಕ್ಕೆ ಶುಭ ಸಂದೇಶ ನೀಡಿದ್ದಾರೆ.
ಹಾಕಿ ದಂತಕತೆ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನಾಚರಣೆ ಅಂಗವಾಗಿ ದೇಶದಾದ್ಯಂತ ಮಂಗಳವಾರ ಕ್ರೀಡಾ ದಿನ ಆಚರಿಸಲಾಯಿತು. ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
‘ಈ ಸಂದರ್ಭದಲ್ಲಿ ಮೇಜರ್ ಧ್ಯಾನ್‌ಚಂದ್ ಅವರಿಗೆ ಗೌರವ ಸಮರ್ಪಿಸುತ್ತೇನೆ. ಭಾರತದ ಕ್ರೀಡೆಗೆ ಸಂಬಂಧಿಸಿದಂತೆ ಈಚೆಗಿನ ವರ್ಷಗಳು ಅತ್ಯಂತ ಮಹತ್ವದ್ದಾಗಿವೆ. ಯಶಸ್ಸಿನ ಓಟ ಇದೇ ರೀತಿ ಮುಂದುವರಿಯಲಿ. ಕ್ರೀಡೆಯು ದೇಶದಾದ್ಯಂತ ಜನಪ್ರಿಯತೆ ಗಳಿಸಲಿ’ ಎಂದು ಮೋದಿ ‘ಟ್ವೀಟ್’ ಮಾಡಿದ್ದಾರೆ.
‘ಭಾರತದ ಹಾಕಿ ಕ್ರೀಡೆಗೆ ಅಪಾರ ಕೊಡುಗೆ ನೀಡಿದ ಧ್ಯಾನ್‌ಚಂದ್ ಅವರಿಗೆ ಗೌರವ ಸಲ್ಲಿಸುತ್ತೇನೆ. ಛಲ, ಕಠಿಣ ಪರಿಶ್ರಮದಿಂದ ದೇಶಕ್ಕೆ ಹೆಮ್ಮೆ ತಂದಿತ್ತ ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು’ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು ಹೇಳಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕಾಮನ್‌ವೆಲ್ತ್ ಕೂಟದ ಲಾನ್ ಬಾಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡುವ ಮೂಲಕ ಕ್ರೀಡಾ ದಿನಾಚರಣೆಯ ಶುಭಹಾರೈಸಿದ್ದಾರೆ.
‘ಲಾನ್ ಬಾಲ್ಸ್ ತಂಡದಲ್ಲಿದ್ದ ರೂಪಾ, ಲವ್ಲಿ, ನಯನ್ಮಣಿ ಮತ್ತು ಪಿಂಕಿ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ ಉಂಟುಮಾಡಬಲ್ಲುದು. ಅಷ್ಟೊಂದು ಜನಪ್ರಿಯತೆ ಪಡೆಯದ ಕ್ರೀಡೆಯನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ’ ಎಂದು ತೆಂಡೂಲ್ಕರ್ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ.
ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ, ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಕ್ರಿಕೆಟಿಗರಾದ ಯುವರಾಜ್ ಸಿಂಗ್, ದಿನೇಶ್ ಕಾರ್ತಿಕ್, ಮಿಥಾಲಿ ರಾಜ್, ಕುಸ್ತಿಪಟು ಸಾಕ್ಷಿ ಮಲಿಕ್ ಅವರೂ ಶುಭಾಷಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.