ಹುಲುನ್‌ಬುಯಿರ್: ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಮತ್ತೊಮ್ಮೆ ಭಾರತ ತಂಡದ ಗೆಲುವಿನಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಮೇಲೆ 2–1 ಜಯ ಪಡೆಯಿತು.
ತನ್ಮೂಲಕ ಆರು ತಂಡಗಳ ರೌಂಡ್ ರಾಬಿನ್ ಲೀಗ್‌ಅನ್ನು ಐದು ಗೆಲುವುಗಳೊಂದಿಗೆ ಪೂರೈಸಿತು. ಇದು ಪಾಕಿಸ್ತಾನಕ್ಕೆ ಈ ಟೂರ್ನಿಯಲ್ಲಿ ಮೊದಲ ಸೋಲು. ಎರಡೂ ತಂಡಗಳು ಈ ಮೊದಲೇ ಸೆಮಿಫೈನಲ್‌ಗೆ ಸ್ಥಾನ ಖಾತರಿಪಡಿಸಿಕೊಂಡಿದ್ದವು.
ಎಂಟನೇ ನಿಮಿಷ ಅಹ್ಮದ್ ನದೀಮ್ ಗಳಿಸಿದ ಗೋಲಿನಿಂದ ಪಾಕಿಸ್ತಾನ ಮುನ್ನಡೆ ಪಡೆಯಿತು. ಆದರೆ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್ ತಂಡದ ಅಜೇಯ ದಾಖಲೆ ಮುಂದುವರಿಸಿದರು.
ಈ ಗೆಲುವಿನ ಮೂಲಕ, ಭಾರತ 2016ರ ನಂತರ ನೆರೆಯ ರಾಷ್ಟ್ರ ಜೊತೆಗಿನ ಮುಖಾಮುಖಿಯಲ್ಲಿ ತನ್ನ ಗೆಲುವಿನ ದಾಖಲೆ ಉತ್ತಮಪಡಿಸಿಕೊಂಡಿತು.
ಇತ್ತಂಡಗಳ ನಡುವೆ ಈ ಹಿಂದಿನ ಪಂದ್ಯಗಳ ರೀತಿ, ಶನಿವಾರದ ಪಂದ್ಯವೂ ಆರಂಭದಿಂದ ಬಿರುಸಿನಿಂದ ಸಾಗಿತು. ಭಾರತ ಹಿಡಿತ ಪಡೆಯಲು ಯತ್ನಿಸಿದರೂ, ಪಾಕಿಸ್ತಾನವು ಪಂದ್ಯ ಮುಂದುವರಿಯುತ್ತಿದ್ದಂತೆ ವಿಶ್ವಾಸ ಹೆಚ್ಚಿಸಿಕೊಂಡಿತು. ಮೊದಲ ಗೋಲನ್ನೂ ಗಳಿಸಿತು.
ಹನ್ನನ್ ಶಹೀದ್ ಮಿಡ್‌ಫೀಲ್ಡ್‌ನಿಂದ ಕೌಶಲಪೂರ್ಣವಾಗಿ ಭಾರತದ ರಕ್ಷಣಾ ಆಟಗಾರರನ್ನು ತಪ್ಪಿಸಿಕೊಂಡು ಚೆಂಡನ್ನು ಮುನ್ನಡೆಸಿ , ಆಯಕಟ್ಟಿನ ಸ್ಥಾನದಲ್ಲಿ ಕಾಯುತ್ತಿದ್ದ ನದೀಮ್ ಅವರಿಗೆ ದಾಟಿಸಿದರು. ನದೀಮ್ ತಮಗೊಲಿದ ಅವಕಾಶ ವ್ಯರ್ಥಪಡಿಸಲಿಲ್ಲ.
ಇದರಿಂದ ಕ್ಷಣಕಾಲ ವಿಚಲಿತಗೊಂಡರೂ ಭಾರತ ಧೃತಿಗೆಡಲಿಲ್ಲ. ಸಹನೆಯಿಂದ ಆಡಿ ಭಾರತ 13ನೇ ನಿಮಿಷ ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸಿಕೊಂಡಿತು. ಇದರಲ್ಲಿ ಶಕ್ತಿಶಾಲಿ ಡ್ರ್ಯಾಗ್‌ಫ್ಲಿಕ್ ಮೂಲಕ ಹರ್ಮನ್‌ಪ್ರೀತ್, ಪಾಕ್ ಗೋಲ್‌ಕೀಪರ್ ಮುನೀಬ್ ಅವರ ಎಡಗಡೆಯಿಂದ ಚೆಂಡನ್ನು ಗೋಲಿನೊಳಕ್ಕೆ ನಿರ್ದೇಶಿಸಿದರು. ಸ್ಕೋರ್ ಸಮನಾಯಿತು.
ಎರಡನೇ ಕ್ವಾರ್ಟರ್‌ನಲ್ಲೂ ಭಾರತ ಒತ್ತಡ ಮುಂದುವರಿಸಿತು. 19ನೇ ನಿಮಿಷ ದೊರೆತ ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರು ಪಾಕ್ ರಕ್ಷಣೆಯನ್ನು ಮತ್ತೊಮ್ಮೆ ಭೇದಿಸಿ ಚೆಂಡನ್ನು ಗುರಿತಲುಪಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಚೆಂಡುಹೆಚ್ಚು ಹೊತ್ತು ಭಾರತದ ಹಿಡಿತದಲ್ಲೇ ಇದ್ದರೂ, ಪಾಕ್ ತಂಡಕ್ಕೆ ಕೆಲವು ಅವಕಾಶಗಳು ದೊರೆತಿದ್ದವು. ವಿರಾಮಕ್ಕೆ 45 ಸೆಕೆಂಡುಗಳಿರುವಾಗ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಸುಫ್ಯಾನ್ ಖಾನ್ ಫ್ಲಿಕ್‌ನಲ್ಲಿ ಚೆಂಡು ಅಡ್ಡಪಟ್ಟಿಗೆ ಹೊಡೆದು ಗುರಿತಲುಪಿತು. ಆದರೆ ‘ರೇಯ್ಡ್ಸ್ ಬಾಲ್’ ಎಂದು ಗೋಲು ನಿರಾಕರಿಸಲಾಯಿತು.
ಮೂರನೇ ಕ್ವಾರ್ಟರ್‌ನಲ್ಲೂ ಭಾರತ ಮೇಲುಗೈ ಸಾಧಿಸಿದರೂ, ಕೊನೆಯಲ್ಲಿ ಪಾಕ್ ಹೋರಾಟ ತೋರಿತು. ಆ ತಂಡಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳೂ ಒದಗಿದವು. ಆದರೆ ಭಾರತದ ರಕ್ಷಣಾಕೋಟೆ ಭೇದಿಸಲಾಗಲಿಲ್ಲ.
ಕೊನೆಯ ಕ್ವಾರ್ಟರ್‌ನಲ್ಲಿ (15 ನಿಮಿಷ) ಎರಡೂ ತಂಡಗಳು ಆಕ್ರಮಣಕಾರಿ ಆಟದಲ್ಲಿ ತೊಡಗಿದವು. ಭಾರತಕ್ಕೆ ಮೂರು ಪೆನಾಲ್ಟಿ ಕಾರ್ನರ್‌ಗಳು ದೊರೆತಗೂ ಒಂದೂ ಪರಿವರ್ತನೆಯಾಗಲಿಲ್ಲ.
ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಕೊಂಚ ಕಾವೇರಿದ ವಾತಾವರಣವೂ ಇತ್ತು. ಪಾಕ್ ತಂಡದ ಅಶ್ರಫ್ ವಾಹೀದ್ ರಾಣಾ ಅವರು ಜುಗರಾಜ್ ಅವರನ್ನು ಭುಜದಿಂದ ತಳ್ಳಿದರು. ಕೆಳಗೆ ಬಿದ್ದ ಅವರು ಕೆಲಕ್ಷಣ ನರಳಿದರು. ಹರ್ಮನ್‌ಪ್ರೀತ್ ಮತ್ತು ಜರ್ಮನ್‌ಪ್ರೀತ್ ತಕ್ಷಣ ಅಲ್ಲಿಗೆ ಧಾವಿಸಿ ವಾದಿಸಲು ಮುಂದಾದರು. ಆದರೆ ಆನ್‌ಫೀಲ್ಡ್ ಅಂಪೈರ್‌ಗಳು, ಪಾಕ್ ನಾಯಕ ಬಟ್ ಮತ್ತು ಇತ್ತಂಡಗಳ ಕೆಲ ಆಟಗಾರರು ಪರಿಸ್ಥಿತಿ ತಿಳಿಗೊಳಿಸಿದರು. ರಾಣಾ ಅವರಿಗೆ ಹಳದಿ ಕಾರ್ಡ್ (ಎಚ್ಚರಿಕೆ) ಪ್ರದರ್ಶಿಸಲಾಯಿತು. ಅಂಪೈರ್‌ಗಳು ಮರುಪ್ರಸಾರದ ವಿಡಿಯೊ ಪರಿಶೀಲಿಸಿದ್ದರಿಂದ ಹತ್ತು ನಿಮಿಷ ಆಟ ಸ್ಥಗಿತಗೊಂಡಿತು.
ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳ ನಡುವೆ ಇದಕ್ಕೆ ಮೊದಲು ನಡೆದ ಪಂದ್ಯ 3–3 ಡ್ರಾ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.