ADVERTISEMENT

CWG 2022: ಹರ್ಮನ್‌ಪ್ರೀತ್‌ ಸಿಂಗ್ ಹ್ಯಾಟ್ರಿಕ್‌, ಸೆಮಿಫೈನಲ್‌ಗೆ ಭಾರತ ಲಗ್ಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:00 IST
Last Updated 4 ಆಗಸ್ಟ್ 2022, 21:00 IST
ವೇಲ್ಸ್ ಎದುರು ಗೋಲು ಗಳಿಸಿದ ಭಾರತ ತಂಡದ ಆಟಗಾರರು ಸಂಭ್ರಮಿಸಿದರು –ಪಿಟಿಐ ಚಿತ್ರ
ವೇಲ್ಸ್ ಎದುರು ಗೋಲು ಗಳಿಸಿದ ಭಾರತ ತಂಡದ ಆಟಗಾರರು ಸಂಭ್ರಮಿಸಿದರು –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌ (ಪಿಟಿಐ): ಹರ್ಮನ್‌ಪ್ರೀತ್‌ ಸಿಂಗ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ವೇಲ್ಸ್‌ ತಂಡವನ್ನು 4–1 ರಲ್ಲಿ ಮಣಿಸಿದ ಭಾರತ, ಕಾಮನ್‌ವೆಲ್ತ್‌ ಕೂಟದ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಈ ಗೆಲುವಿನ ಮೂಲಕ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನವನ್ನು ಭಾರತ ಖಚಿತಪಡಿಸಿಕೊಂಡಿತು.

ಗುರುವಾರ ನಡೆದ ಪಂದ್ಯದ 19, 20 ಮತ್ತು 40ನೇ ನಿಮಿಷಗಳಲ್ಲಿ ಹರ್ಮನ್‌ಪ್ರೀತ್‌ ಗೋಲು ಗಳಿಸಿದರು. ಮತ್ತೊಂದು ಗೋಲನ್ನು ಗುರ್ಜಂತ್‌ ಸಿಂಗ್‌ 49ನೇ ನಿಮಿಷದಲ್ಲಿ ತಂದಿತ್ತರು.

ADVERTISEMENT

ವೇಲ್ಸ್‌ ತಂಡದ ಏಕೈಕ ಗೋಲನ್ನು ಡ್ರ್ಯಾಗ್‌ ಫ್ಲಿಕ್ಕರ್‌ ಗ್ಯಾರೆತ್‌ ಫರ್ಲಾಂಗ್‌ ಅವರು 55ನೇ ನಿಮಿಷದಲ್ಲಿ ಗಳಿಸಿದರು.

ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳ ಹೆಚ್ಚಿನ ಸಮಯದಲ್ಲೂ ಚೆಂಡು ಭಾರತದ ಆಟಗಾರರ ನಿಯಂತ್ರಣದಲ್ಲಿತ್ತು. ಆದರೂ ಮೊದಲ ಕ್ವಾರ್ಟರ್‌ನಲ್ಲಿ ವೇಲ್ಸ್‌, ಪ್ರಬಲ ಪೈಪೋಟಿ ಒಡ್ಡಿತು.

ಮೊದಲ ಕ್ವಾರ್ಟರ್‌ನ ಎಂಟನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಗಳಿಸಿದ್ದು ಬಿಟ್ಟರೆ, ಗೋಲು ಗಳಿಸುವ ಬೇರೆ ಉತ್ತಮ ಅವಕಾಶಗಳನ್ನು ಭಾರತ ಸೃಷ್ಟಿಸಲಿಲ್ಲ. ಪೆನಾಲ್ಟಿ ಕಾರ್ನರ್‌ನಲ್ಲಿ ವರುಣ್‌ ಕುಮಾರ್‌ ಗೋಲು ಗಳಿಸಲು ವಿಫಲರಾದರು.

18ನೇ ನಿಮಿಷದಲ್ಲಿ ಬೆನ್ನುಬೆನ್ನಿಗೆ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಎರಡನೇ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್‌, ಭಾರತಕ್ಕೆ ಮುನ್ನಡೆ ತಂದಿತ್ತರು. 20 ನಿಮಿಷದಲ್ಲಿ ಅವರು ಪೆನಾಲ್ಟಿ ಅವಕಾಶದಲ್ಲಿ ಮತ್ತೊಂದು ಗೋಲು ಗಳಿಸಿಕೊಟ್ಟರು.

40ನೇ ನಿಮಿಷದಲ್ಲಿ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಒಂದನ್ನು ಸದುಪಯೋಗಪಡಿಸಿಕೊಂಡ ಹರ್ಮನ್‌ಪ್ರೀತ್‌ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಇದಾದ ಒಂಭತ್ತು ನಿಮಿಷಗಳ ಬಳಿಕ ಭಾರತ ನಾಲ್ಕನೇ ಗೋಲು ಗಳಿಸಿತು.

ವೇಲ್ಸ್‌ ಕೊನೆಯ ಕ್ವಾರ್ಟರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತಾದರೂ, ಆಗ ಕಾಲ ಮಿಂಚಿಹೋಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.