ನವದೆಹಲಿ: ಭಾರತದ ಯುವ ವೇಟ್‌ಲಿಫ್ಟರ್ ಹರ್ಷದಾ ಗರುಡ್ ಅವರು ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಮತ್ತು ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.
ಮಂಗಳವಾರ ನಡೆದ ಮಹಿಳೆಯರ 45 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 157 ಕೆ.ಜಿ (69 ಕೆ.ಜಿ+ 88 ಕೆ.ಜಿ) ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದರು. 18 ವರ್ಷದ ಹರ್ಷದಾ, ಮೇ ತಿಂಗಳಲ್ಲಿ ನಡೆದಿದ್ದ ಜೂನಿಯರ್ ವಿಶ್ವಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಜಯಿಸಿದ್ದರು. ಅಲ್ಲಿ ನೀಡಿದ್ದ ಪ್ರದರ್ಶನಕ್ಕಿಂತ (ಒಟ್ಟು 153 ಕೆ.ಜಿ) ನಾಲ್ಕು ಕೆ.ಜಿಯಷ್ಟು ಅಧಿಕ ಭಾರ ಎತ್ತುವಲ್ಲಿ ಯಶಸ್ವಿಯಾದರು.
ಭಾರತದ ಸೌಮ್ಯಾ ದಳವಿ ಅವರು 45 ಕೆ.ಜಿ. ಯೂತ್ ವಿಭಾಗದಲ್ಲಿ ಕಂಚು ಜಯಿಸಿದರು. ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲೂ ಕಂಚು ಗೆದ್ದಿದ್ದ ಅವರು ಒಟ್ಟು 145 ಕೆ.ಜಿ. ಸಾಧನೆ ಮಾಡಿದರು.
ಪುರುಷರ 49 ಕೆ.ಜಿ. ಯೂತ್ ವಿಭಾಗದ ಸ್ನ್ಯಾಚ್‌ನಲ್ಲಿ ಎಲ್.ಧನುಷ್ 85 ಕೆ.ಜಿ ಸಾಧನೆಯೊಂದಿಗೆ ಕಂಚು ಜಯಿಸಿದರು. ಆದರೆ ಒಟ್ಟಾರೆಯಾಗಿ ಅವರು 185 ಕೆ.ಜಿ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡರು.
ಈ ಚಾಂಪಿಯನ್‌ಷಿಪ್‌ನಲ್ಲಿ ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ಹಾಗೂ ಒಟ್ಟಾರೆ ಸಾಧನೆಗೆ ಪ್ರತ್ಯೇಕವಾಗಿ ಪದಕಗಳನ್ನು ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.