ADVERTISEMENT

ಶೂಟರ್‌ಗಳ ತರಬೇತುದಾರ ಸಮರೇಶ್ ಮನೆ ತೆರವಿಗೆ ತಡೆ ನೀಡಲು HC ನಕಾರ

ಪಿಟಿಐ
Published 5 ಆಗಸ್ಟ್ 2024, 14:06 IST
Last Updated 5 ಆಗಸ್ಟ್ 2024, 14:06 IST
<div class="paragraphs"><p>ಸಮರೇಶ್ ಜಂಗ್</p></div>

ಸಮರೇಶ್ ಜಂಗ್

   

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರಿಗೆ ಮಾರ್ಗದರ್ಶನ ನೀಡಿದ ಸಮರೇಶ್ ಜಂಗ್ ಅವರ ಅಕ್ರಮ ಮನೆ ತೆರವಿಗೆ ಸ್ಥಳೀಯ ಆಡಳಿತ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಮನೆಯಲ್ಲಿ ಸಮರೇಶ್ ಅವರು ವಾಸವಿದ್ದು, ಇದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರಿ ದಾಖಲೆಗಳು ಇಲ್ಲ. ಇದು ಒಟ್ಟು 32 ಎಕರೆ ಪ್ರದೇಶವಾಗಿದ್ದು ಸುಮಾರು ಒಂದು ಸಾವಿರ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಜಾಗದ ಮಾಲೀಕತ್ವ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ 1ರಂದು ಸಮರೇಶ್ ಅವರ ಸೋದರ ಸಮೀರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ADVERTISEMENT

ಇತ್ತೀಚೆಗೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದ ಭೂ ಅಭಿವೃದ್ದಿ ಇಲಾಖೆ, 48 ಗಂಟೆಯೊಳಗೆ ಮನೆ ಖಾಲಿ ಮಾಡಲು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸಮೀರ್ ಜಂಗ್ ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾ. ಸಂಜೀವ್ ನರುಲಾ ಅವರಿದ್ದ ಪೀಠವು, ಅರ್ಜಿಯ ವಿಚಾರಣೆ ನಡೆಸಿತ್ತು. 1940ರಿಂದ ಖೈಬರ್ ಪಾಸ್‌ನಲ್ಲಿರುವ ಭುಟ್ಟಾ ಸಿಂಗ್ ಕಟ್ಟಡದಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಆದ ಕರ್ನಲ್ ಶೇರ್ ಜಂಗ್ ಅವರ ಕುಟುಂಬ ವಾಸವಿತ್ತು. ಇವರು ಇಲ್ಲಿನ ಉಪ ಬಾಡಿಗೆದಾರರಾಗಿದ್ದಾರೆ. ಹೀಗಾಗಿ ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸಬಾರದು ಎಂದು ಅರ್ಜಿದಾರರ ಪರ ವಕೀಲರು ಪೀಠವನ್ನು ಕೋರಿದರು.

ಇವರ ವಾದ ಸಮಂಜಸವಾಗಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ ಅರ್ಜಿಯನ್ನು ವಜಾಗೊಳಿಸಿತು. ಈ ಪ್ರಕರಣದಲ್ಲಿ ಮಾರ್ಚ್ 1ರಂದು ಏಕಸದಸ್ಯ ಹಾಗೂ ವಿಭಾಗೀಯ ಪೀಠದಲ್ಲಿ ಇವರ ಅರ್ಜಿ ತಿರಸ್ಕೃತಗೊಂಡಿದೆ. ಹೀಗಾಗಿ ಅಲ್ಲಿನ ತೀರ್ಪು ಇಲ್ಲಿಯೂ ಅನ್ವಯವಾಗಲಿದೆ ಎಂದು ನ್ಯಾ. ನರುಲಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. 

‘ಈ ಪ್ರಕರಣದಲ್ಲಿ ಅರ್ಜಿದಾರರು ಹಾಗೂ ಪ್ರತಿವಾದಿಗಳ ನಡುವೆ ಯಾವುದೇ ಒಪ್ಪಂದ ನಡೆದಿಲ್ಲ. 1978ರ ನಂತರ ಪ್ರತಿವಾದಿಗಳಿಗೆ ಯಾವುದೇ ರೀತಿಯ ಹಣ ಪಾವತಿಗೆ ಸಂಬಂಧಿಸಿದ ದಾಖಲೆಗಳು ಇಲ್ಲ. ಜಾಗಕ್ಕೆ ಆಸ್ತಿ ತೆರಿಗೆ ಕಟ್ಟಿದ ಮಾತ್ರಕ್ಕೆ ಜಾಗವೇ ಅವರದ್ದು ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿತು.

ಈ ಪ್ರದೇಶದಲ್ಲಿ ಈಗಾಗಲೇ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಆರಂಭಗೊಂಡಿದೆ. ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಜುಲೈ 9ರಂದು ಕೆಲ ನಿವಾಸಿಗಳ ಅರ್ಜಿಗಳನ್ನು ವಜಾಗೊಳಿಸಿತ್ತು. ಮಾರ್ಚ್ 3ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅಲ್ಲಿಯೂ ಏಕಸದಸ್ಯ ಪೀಠದ ಆದೇಶವನ್ನೇ ಜುಲೈ 29ರಂದು ಎತ್ತಿ ಹಿಡಿಯಲಾಗಿತ್ತು.

ಸ್ವತಃ ಒಲಿಂಪಿಯನ್ ಶೂಟರ್ ಆಗಿರುವ ಸಮರೇಶ್ ಅವರು ‘ಗೋಲ್ಡನ್‌ ಫಿಂಗರ್‌’ ಎಂದೇ ಖ್ಯಾತನಾಮರಾಗಿದ್ದಾರೆ. 2006 ಮತ್ತು 2010ರ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಅವರು ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 

‘ಈ ಜಾಗದಲ್ಲಿ ನಮ್ಮ ಕುಟುಂಬವು 75 ವರ್ಷಗಳಿಂದ ವಾಸವಾಗಿದೆ. ಸಿಂಗ್ ಎಂಬುವವರು ಲೀಸ್ ಪಡೆದುಕೊಂಡಿರುವ ಜಾಗ ಇದು. ಬಹಳ ವರ್ಷಗಳಿಂದ ನಾವು ಅವರಿಗೆ ಬಾಡಿಗೆ ಪಾವತಿಸುತ್ತಿದ್ದೇವೆ’ ಎಂದು ಸಮರೇಶ್ ಹೇಳಿದ್ದಾರೆ. 

‘ಭೂ ಅಭಿವೃದ್ದಿ ಇಲಾಖೆ ಕಚೇರಿಯು ಈಚೆಗೆ ನೋಟಿಸ್ ಜಾರಿಗೊಳಿಸಿದೆ. ಆದರೆ ನಾನು ಪ್ಯಾರಿಸ್‌ನಿಂದ ಮರಳಿದ ನಂತರವಷ್ಟೇ ನನಗೆ ಈ ವಿಷಯ ತಿಳಿಯಿತು’ ಎಂದು ಹೇಳಿದರು. 

‘ನಾನು ಕಾನೂನಿಗಿಂತ ದೊಡ್ಡವನಲ್ಲ. ಕಾನೂನಿ ಪ್ರಕಾರ ಯಾವುದೇ ಸೂಚನೆ ಬಂದರೂ ಪಾಲಿಸುತ್ತೇನೆ. ಮನೆಯನ್ನು ಖಾಲಿ ಮಾಡಲೂ ಸಿದ್ಧವಿದ್ದೇವೆ. ಆದರೆ ಎರಡು ದಿನಗಳಲ್ಲಿ ಖಾಲಿ ಮಾಡುವುದು ಹೇಗೆ ಸಾಧ್ಯ. ಒಂದೆರಡು ತಿಂಗಳುಗಳ ಸಮಯವನ್ನಾದರೂ ನೀಡಬೇಕು‘ ಎಂದು ಸಮರೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.