ಬೆಂಗಳೂರು: ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಳ ಮಿಶ್ರಣವಾದ ಹೇ ಬಾಲ್ ಕ್ರೀಡೆಯು ಮೊದಲ ಬಾರಿ ಆರಂಭವಾಯಿತು. ಈ ವಿಶೇಷ ಸಂದರ್ಭಕ್ಕೆ ಬೆಂಗಳೂರು ವೇದಿಕೆಯಾಯಿತು.
ಕರ್ನಾಟ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ (ಕೆಎಸ್‌ಬಿಎ)ಯಲ್ಲಿ ಸೋಮವಾರ ಆರಂಭವಾದ 19 ವರ್ಷದೊಳಗಿನವರ ಟೂರ್ನಿಯಲ್ಲಿ 25 ದೇಶಗಳ ಆಟಗಾರರು ಸ್ಪರ್ಧಿಸಿದ್ದಾರೆ. ಅದರಲ್ಲಿ ಕರ್ನಾಟಕದ ನಾಲ್ವರ ತಂಡವೂ ಇದೆ. ಜೂನಿಯರ್ ಬಾಲಕರ ವಿಭಾಗದಲ್ಲಿ ಕರ್ನಾಟಕದ ಮಯಂಕ್ ಕಾರ್ತಿಕ್ ಮತ್ತು ತಮಿಳುನಾಡಿನ ಲಕ್ಷ್ಮೀನಾರಾಯಣ, ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ನತಾಶಾ ಚೇತನ್ ಮತ್ತು ತಮಿಳುನಾಡಿನ ಎಲ್. ಶ್ರುತಿ ಅವರಿದ್ದಾರೆ.
ಭಾರತದಲ್ಲಿ ಈ ಕ್ರೀಡೆಯ ಪ್ರಚಾರ ರಾಯಭಾರಿಯಾಗಿರುವ ಪ್ರಣೀತ್ ರಾಮಚಂದಾನಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು
‘ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಳ ಮಿಶ್ರಣ ಹೇ ಬಾಲ್ ಆಗಿದೆ. ಇದು ಚೀನಾದಲ್ಲಿ 8 ಬಾಲ್ ಆಟದಿಂದ ಪ್ರೇರಿತರಾದ ಜಾಯ್ ಎಂಬುವವರು ಹೇ ಬಾಲ್ ಆಟ ರಚಿಸಿದರು. ಇದೇ ಮೊದಲ ಸಲ ಜಾಗತಿಕ ಮಟ್ಟದ ಟೂರ್ನಿಯನ್ನು ಇಲ್ಲಿ ಆಯೋಜಿಸುತ್ತಿದ್ದೇವೆ. ವಾರ್ಷಿಕ ₹ 100 ಕೋಟಿ ಮೌಲ್ಯದ ನಗದು ಬಹುಮಾನ ಇರಲಿದೆ. ಈ ಆಟದಲ್ಲಿರುವ ರೋಚಕ ಅಂಶಗಳು ಮತ್ತು ನಗದು ಬಹುಮಾನದ ಆಕರ್ಷಣೆಯಿಂದಾಗಿ ಹೆಚ್ಚೆಚ್ಚು ಆಟಗಾರರು ಒಲವು ತೋರುತ್ತಿದ್ದಾರೆ. ಅಲ್ಲದೇ ಪ್ರದರ್ಶನ ಮೌಲ್ಯವೂ ಹೆಚ್ಚಿದೆ. 2032ರ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯೂ ಇದೆ’ ಎಂದರು.
‘ಪ್ರತಿಯೊಂದು ಪಂದ್ಯವು 100 ನಿಮಿಷಗಳದ್ದಾಗಿರುತ್ತದೆ. ಪ್ರತಿ ಶಾಟ್ 45 ಸೆಕೆಂಡುಗಳಾಗಿರುತ್ತದೆ. ಇಬ್ಬರು ಆಟಗಾರರು (ಪರಸ್ಪರ ಎದುರಾಳಿ) ಒಂದು ಪಂದ್ಯದಲ್ಲಿ ಆಡುತ್ತಾರೆ. 7 ಸಾಲಿಡ್ ಮತ್ತು 7 ಸ್ಟ್ರೈಪ್ ಬಣ್ಣಗಳ ಚೆಂಡುಗಳು ಇರುತ್ತವೆ. ಒಂದು ಕಪ್ಪು ಚೆಂಡು ಇರುತ್ತದೆ. ಎಲ್ಲ ಚೆಂಡುಗಳನ್ನು ಪಾಕೆಟ್ ಮಾಡುವ ಸ್ಪರ್ಧಿಯು ಕೊನೆಯಲ್ಲಿ ಬ್ಯಾಕ್ ಬಾಲ್ ಪಾಕೆಟ್ ಮಾಡಬೇಕು. ಅಗ ಫ್ರೇಮ್ ಸಂಪೂರ್ಣವಾಗುತ್ತದೆ. 50 ನಿಮಿಷಗಳ ನಂತರ 7 ನಿಮಿಷಗಳ ವಿರಾಮ ಇರುತ್ತದೆ. ದ್ವಿತೀಯಾರ್ಧದಲ್ಲಿ 50 ನಿಮಿಷಗಳಿರುತ್ತವೆ’ ಎಂದೂ ಪ್ರಣೀತ್ ವಿವರಿಸಿದರು. ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿದ್ದಾರೆ.
ಈ ಟೂರ್ನಿಯು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿದೆ. ನ.28ರಂದು ಮುಕ್ತಾಯವಾಗಲಿದೆ.
ಬೆಳಿಗ್ಗೆ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಶ್ವ ಪೂಲ್ ಬಿಲಿಯರ್ಡ್ಸ್ ಸಂಸ್ಥೆ (ಡಬ್ಲ್ಯುಪಿಎ) ಪ್ರಧಾನ ಕಾರ್ಯದರ್ಶಿ ಕರ್ಟ್ ಜೊರ್ಗೆನ್ ಸ್ಯಾಂಡ್‌ಮನ್, ಕರ್ನಾಟಕದ ಸ್ನೂಕರ್ ಆಟಗಾರ ಐ.ಎಚ್. ಮನುದೇವ್, ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಭಾಸ್ಕರ್, ಭಾರತ ಹೇ ಬಾಲ್ ಆಟಗಾರ ಮತ್ತು ಲಕ್ಸ್ ಬಿಲಿಯರ್ಡ್ಸ್ ವ್ಯವಸ್ಥಾಪಕ ಪಾಲುದಾರ ಉಪೇಂದ್ರ ಥಾಪಾ ಸಿಂಗ್, ಕೆಎಸ್‌ಬಿಎ ಸಹ ಸಂಸ್ಥಾಪಕ ಎಂ. ಮಣಿ ಮತ್ತು ತಮಿಳುನಾಡು ಬಿಲಿಯರ್ಡ್ಸ್–ಸ್ನೂಕರ್ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಸಿ. ಮನೋಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.