ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಭಾನುವಾರ ನಡೆದ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಹರಾಜು ಪ್ರಕ್ರಿಯೆಯಲ್ಲಿ ₹ 78 ಲಕ್ಷಕ್ಕೆ ಸೂರ್ಮಾ ಹಾಕಿ ಕ್ಲಬ್ ಖರೀದಿಸಿತು. ಇದರೊಂದಿಗೆ ಹರ್ಮನ್ ಅವರು ಮೊದಲ ದಿನದ ಬಿಡ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರನಾದರು.
ಭಾರತ ತಂಡದ ಆಟಗಾರರನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಎಂಟು ಫ್ರ್ಯಾಂಚೈಸಿಗಳೂ ಅಪಾರ ಪೈಪೋಟಿ ನಡೆಸಿದವು. ಅಲ್ಲದೇ ಬಹಳಷ್ಟು ಹಣವನ್ನೂ ವಿನಿಯೋಗಿಸಿದವು. ಅಭಿಷೇಕ್ ಅವರನ್ನು ₹ 72 ಲಕ್ಷಕ್ಕೆ ಶರಾಚಿ ರಾರ್ ಬೆಂಗಾಲ್ ಟೈಗರ್ಸ್ ತಂಡವು ಖರೀದಿಸಿತು. ಅವರು ಹೆಚ್ಚು ಮೌಲ್ಯ ಗಳಿಸಿದ ಎರಡನೇ ಆಟಗಾರನಾದರು. ಯುಪಿ ರುದ್ರಾಸ್ ತಂಡವು ಹಾರ್ದಿಕ್ ಸಿಂಗ್ (₹70 ಲಕ್ಷ) ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಪ್ರಮುಖ ಆಟಗಾರರಾದ ಅಮಿತ್ ರೋಹಿದಾಸ್ (₹ 48 ಲಕ್ಷ) ಅವರನ್ನು ತಮಿಳುನಾಡು ಡ್ರ್ಯಾಗನ್ಸ್, ಜುಗರಾಜ್ ಸಿಂಗ್ (₹ 48 ಲಕ್ಷ) ಅವರನ್ನು ಶರಾಚಿ ರಾರ್ ಬೆಂಗಾಲ್ ಟೈಗರ್ಸ್ ತಂಡಗಳು ಖರೀದಿಸಿದವು. ಹೈದರಾಬಾದ್ ತೂಫಾನ್ಸ್ ತಂಡವು ಸುಮಿತ್ (₹ 46 ಲಕ್ಷ) ಅವರನ್ನು ಸೇರ್ಪಡೆ ಮಾಡಿಕೊಂಡಿತು.
ವಿದೇಶಿ ಗೋಲ್‌ಕೀಪರ್ಸ್ ವಿಭಾಗದಲ್ಲಿ, ಐರ್ಲೆಂಡ್‌ನ ಡೇವಿಡ್ ಹಾರ್ಟಿ ₹ 32 ಲಕ್ಷ ಮೌಲ್ಯ ಪಡೆದು ತಮಿಳುನಾಡು ಡ್ರ್ಯಾಗನ್ಸ್ ಸೇರಿದರು. ಜರ್ಮನಿಯ ಜೀನ್ ಪಾಲ್ ಡೆನ್‌ಬರ್ಗ್ (₹ 27 ಲಕ್ಷ) ಹೈದರಾಬಾದ್ ತೂಫಾನ್ಸ್ ತಂಡಕ್ಕೆ, ನೆದರ್ಲೆಂಡ್ಸ್‌ನ ಪಿರ್ಮಿನ್ ಬ್ಲಾಕ್ (₹ 25 ಲಕ್ಷ) ಶರಾಚಿ ರಾರ್ ಬೆಂಗಾಲ್ ಟೈಗರ್ಸ್ ತಂಡಕ್ಕೆ ಮತ್ತು ಬೆಲ್ಜಿಯಂನ ವಿನ್ಸೆಂಟ್ ವನಾಶ್ (₹ 23 ಲಕ್ಷ) ಅವರನ್ನು ಸೂರ್ಮಾ ಹಾಕಿ ಕ್ಲಬ್ ಖರೀದಿಸಿದವು.
ಭಾರತೀಯ ಗೋಲ್‌ಕೀಪರ್ಸ್ ವಿಭಾಗದಲ್ಲಿ ಸೂರಜ್ ಕರ್ಕೆರಾ (₹ 22 ಲಕ್ಷ) ಮತ್ತು ಪವನ್ (₹ 15 ಲಕ್ಷ) ಅವರನ್ನು ಕ್ರಮವಾಗಿ ಗೊನಾಶಿಕಾ ತಂಡ ಮತ್ತು ಡೆಲ್ಲಿ ಎಸ್‌ಜಿ ಪೈಪರ್ಸ್ ತಂಡಗಳು ತಮ್ಮದಾಗಿಸಿಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.