ADVERTISEMENT

ಮರಳಿ ಅರಳಲಿದೆ ಹಾಕಿ ಇಂಡಿಯಾ ಲೀಗ್: ಏಳು ವರ್ಷಗಳ ನಂತರ ಮರುಆರಂಭ

ಏಳು ವರ್ಷಗಳ ನಂತರ ಮರುಆರಂಭ; ಇದೇ ಮೊದಲ ಸಲ ಮಹಿಳಾ ವಿಭಾಗದಲ್ಲಿಯೂ ಲೀಗ್

ಪಿಟಿಐ
Published 4 ಅಕ್ಟೋಬರ್ 2024, 13:53 IST
Last Updated 4 ಅಕ್ಟೋಬರ್ 2024, 13:53 IST
ದಿಲೀಪ್ ಟಿರ್ಕಿ
ದಿಲೀಪ್ ಟಿರ್ಕಿ   

ನವದೆಹಲಿ: ಏಳು ವರ್ಷಗಳ ಹಿಂದೆ ಸ್ಥಗಿತವಾಗಿದ್ದ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಹೊಸ ರೂಪದೊಂದಿಗೆ ಮತ್ತೆ ಆರಂಭವಾಗಲಿದೆ. 

ಇದೇ ವರ್ಷದ ಡಿಸೆಂಬರ್ 28ರಿಂದ 2025ರ ಫೆಬ್ರುವರಿ 1ರವರೆಗೆ ಟೂರ್ನಿ ನಡೆಯಲಿದೆ. ಹತ್ತು ವರ್ಷಗಳವರೆಗೆ ಟೂರ್ನಿ ಆಯೋಜಿಸಲು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅನುಮೋದನೆ ನೀಡಿದೆ. ಪುರುಷರ ವಿಭಾಗದಲ್ಲಿ ಎಂಟು ತಂಡಗಳು ಪೈಪೋಟಿ ನಡೆಸಲಿವೆ. ಇದೇ ಮೊದಲ ಸಲ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, 6 ತಂಡಗಳು ಸೆಣಸಲಿವೆ. ರೂರ್ಕೆಲಾದಲ್ಲಿ ಪುರುಷರ ಮತ್ತು ರಾಂಚಿಯಲ್ಲಿ ಮಹಿಳೆಯರ ಟೂರ್ನಿ ನಡೆಯಲಿವೆ. 

ಅಕ್ಟೋಬರ್ 13 ರಿಂದ 15ರವರೆಗೆ ಆಟಗಾರರ ಹರಾಜು ಆಯೋಜನೆಯಾಗಲಿದೆ..  ಆಟಗಾರರನ್ನು ಮೂರು ವಿಭಾಗಗಳಲ್ಲಿ (₹ 2 ಲಕ್ಷ, ₹ 5 ಲಕ್ಷ ಮತ್ತು ₹ 10 ಲಕ್ಷ) ಬಿಡ್ ಮಾಡಲಾಗುವುದು.

ADVERTISEMENT

ಇದೀಗ 10 ಫ್ರ್ಯಾಂಚೈಸಿಗಳಾದ; ಚೆನ್ನೈ (ಚಾರ್ಲ್ಸ್‌ ಗ್ರುಪ್), ಲಖನೌ (ಯದು ಸ್ಪೋರ್ಟ್ಸ್), ಪಂಜಾಬ್  (ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್), ಪಶ್ಚಿಮ ಬಂಗಾಳ (ಶ್ರಾಚಿ ಸ್ಪೋರ್ಟ್ಸ್), ದೆಹಲಿ (ಎಸ್‌ಜಿ ಸ್ಪೋರ್ಟ್ಸ್ ಮತ್ತು ಎಂಟರ್‌ಟೈನ್‌ಮೆಂಟ್ – ಟೆನಿಸ್ ದಿಗ್ಗಜ ಮಹೇಶ್ ಭೂಪತಿ ಒಡೆತನ), ಒಡಿಶಾ (ವೇದಾಂತ ಲಿಮಿಟೆಡ್), ಹೈದರಾಬಾದ್  (ರೆಸಲ್ಯೂಟ್ ಸ್ಪೋರ್ಟ್ಸ್‌), ರಾಂಚಿ (ನವೋಯಮ್ ಸ್ಪೋರ್ಟ್ಸ್‌ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್) ಪುರುಷರ ವಿಭಾಗದಲ್ಲಿವೆ. 

ಮಹಿಳೆಯರ ವಿಭಾಗದಲ್ಲಿ ಹರಿಯಾಣ (ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್), ಪಶ್ಚಿಮ ಬಂಗಾಳ (ಶ್ರಾಚಿ ಸ್ಪೋರ್ಟ್ಸ್), ದೆಹಲಿ (ಎಸ್‌ಜಿ ಸ್ಪೋರ್ಟ್ಸ್–ಎಂಟರ್‌ಟೈನ್‌ಮೆಂಟ್), ಒಡಿಶಾ (ನವೊಯಮ್ ಸ್ಪೋರ್ಟ್ಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್) ಫ್ರ್ಯಾಂಚೈಸಿಗಳಿವೆ. ಈ ವಿಭಾಗದಲ್ಲಿ ಇನ್ನೂ ಎರಡು ಫ್ರ್ಯಾಂಚೈಸಿಗಳನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು. 

ಪ್ರತಿ ಫ್ರ್ಯಾಂಚೈಸಿಯು 24 ಆಟಗಾರರ ತಂಡವನ್ನು ರಚಿಸಬಹುದಾಗಿದೆ. ಅದರಲ್ಲಿ 16  ಭಾರತೀಯ ಆಟಗಾರರು (ಅದರಲ್ಲಿ 4 ಜೂನಿಯರ್ ಆಟಗಾರರು ಇರುವುದು ಕಡ್ಡಾಯ) ಇರಬೇಕು. 8 ಆಟಗಾರರು ವಿದೇಶದವರಾಗಿರಬೇಕು. 

ಮುಂದಿನ ವರ್ಷದ ಜನವರಿ 26ರಂದು ರಾಂಚಿಯಲ್ಲಿ ಮಹಿಳೆಯರ ಲೀಗ್ ಫೈನಲ್ ನಡೆಯಲಿದೆ. ಫೆ. 1ರಂದು ರೂರ್ಕೆಲಾದಲ್ಲಿ ಪುರುಷರ ವಿಭಾಗದ ಫೈನಲ್ ಆಯೋಜನೆಯಾಗಿದೆ. 

‘ಪ್ರೀಮಿಯರ್ ಹಾಕಿಯಿಂದಾಗಿ ಜಗತ್ತಿನಲ್ಲಿ ಲೀಗ್ ಸಂಸ್ಕೃತಿಗೆ ಚಾಲನೆ ಸಿಕ್ಕಿತ್ತು. ನಾವು ಚುನಾಯಿತಗೊಂಡಾಗಿನಿಂದಲೂ ಎಚ್‌ಐಎಲ್‌ ಮರುಆರಂಭ ಮಾಡುವ ಕನಸು ಕಂಡಿದ್ದೆವು. ಅದೀಗ ನನಸಾಗುತ್ತಿದೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮತ್ತು ಎಚ್‌ಐಎಲ್ ಮುಖ್ಯಸ್ಥ ದಿಲೀಪ್ ಟಿರ್ಕಿ ಹೇಳಿದ್ದಾರೆ. 

ಭಾರತ ಮಹಿಳಾ ಹಾಕಿ ತಂಡ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.