ADVERTISEMENT

ಫಿಟ್‌ನೆಸ್‌ ಜಾಗೃತಿ ಅಭಿಯಾನದಲ್ಲಿ ಹಿಮಾ, ನೀರಜ್‌ ಭಾಗಿ

ಪಿಟಿಐ
Published 8 ಸೆಪ್ಟೆಂಬರ್ 2020, 14:14 IST
Last Updated 8 ಸೆಪ್ಟೆಂಬರ್ 2020, 14:14 IST
ಹಿಮಾ ದಾಸ್‌–ಪಿಟಿಐ ಚಿತ್ರ
ಹಿಮಾ ದಾಸ್‌–ಪಿಟಿಐ ಚಿತ್ರ   

ಮುಂಬೈ: ವೇಗದ ಓಟಗಾರ್ತಿ ಹಿಮಾ ದಾಸ್‌, ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಹಾಗೂ ಭಾರತದ ಬ್ಯಾಡ್ಮಿಂಟನ್‌ ಮುಖ್ಯ ಕೋಚ್‌ ಪುಲ್ಲೇಲ ಗೋಪಿಂಚಂದ್ ಅವರು ದೈನಂದಿನ ಫಿಟ್‌ನೆಸ್‌ ವ್ಯಾಯಾಮದ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಸೆಪ್ಟೆಂಬರ್ 13ರಿಂದ 27ರವರೆಗೆ ಈ ಕುರಿತು ಅಭಿಯಾನ ನಡೆಯಲಿದೆ.

2019ರ ಆಗಸ್ಟ್‌ 29ರಂದು ಆರಂಭವಾದ ‘ಫಿಟ್‌ ಇಂಡಿಯಾ‘ ಕಾರ್ಯಕ್ರಮದ ವರ್ಷಾಚರಣೆ ಪ್ರಯುಕ್ತ ಐಡಿಬಿಐ ಫೆಡರಲ್‌ ಫ್ಯೂಚರ್‌ಫಿಯರ್‌ಲೆಸ್‌ ಚಾಂಪಿಯನ್ಸ್‌ ಚಾಲೆಂಜ್‌ ಅಭಿಯಾನ ನಡೆಯಲಿದೆ. ದೇಶ, ವಿದೇಶದ 15 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ.

ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ (ಎಎಫ್‌ಐ) ಸಹಯೋಗದೊಂದಿಗೆ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸುತ್ತಿರುವ ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಕನಿಷ್ಠ 2.5 ಕಿಲೋಮೀಟರ್‌ನಿಂದ ಗರಿಷ್ಠ 10 ಕಿ.ಮೀ.ವರೆಗೆ ನಡಿಗೆ ಅಥವಾ ಓಟದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ದೈನಂದಿನ ಜೀವನದಲ್ಲಿ ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶ.

ADVERTISEMENT

ಈ ಅಭಿಯಾನದ 15 ದಿನಗಳ ಅವಧಿಯಲ್ಲಿ ಭಾರತದ ಪ್ರಮುಖ ಅಥ್ಲೀಟ್‌ಗಳು, ಸುಲಭ ಹಾಗೂ ಉಪಯುಕ್ತ ವ್ಯಾಯಾಮಗಳ ಕುರಿತು ಹೇಳಿಕೊಡಲಿದ್ದಾರೆ.

‘ಭಾರತದ ಕ್ರೀಡಾತಾರೆಗಳನ್ನು ಗುರುತಿಸುವ ಹಾಗೂ ಫಿಟ್‌ನೆಸ್‌ಗೆ ಸಮಗ್ರವಾದ ವ್ಯಾಯಾಮ ಕ್ರಮವನ್ನು ಪ್ರೋತ್ಸಾಹಿಸುವ ಫ್ಯೂಚರ್‌ಫಿಯರ್‌ಲೆಸ್‌ ಚಾಂಪಿಯನ್ಸ್‌ ಚಾಲೆಂಜ್‌ ಕುರಿತು ಸಂತೋಷವೆನಿಸುತ್ತದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಫಿಟ್‌ನೆಸ್‌ ಅತ್ಯಗತ್ಯ‘ ಎಂದು ಎಎಫ್‌ಐ ಅಧ್ಯಕ್ಷ ಆದಿಲ್‌ ಸುಮರಿವಾಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.