ನೊವೆ ಮೆಸ್ಟೊ, ಚೆಕ್ ಗಣರಾಜ್ಯ: ಭಾರತದ ಸ್ಪ್ರಿಂಟರ್ ಹಿಮಾ ದಾಸ್ ಯುರೋಪ್‌ನಲ್ಲಿ ‘ಚಿನ್ನದ ಓಟ’ ಮುಂದುವರಿಸಿದ್ದಾರೆ.
ಪ್ರಾಗ್‌ನಲ್ಲಿ ಶನಿವಾರ ನಡೆದ ನೊವಾ ಮೆಸ್ಟೊ ಅಥ್ಲೆಟಿಕ್ ಕೂಟದ 400 ಮೀ. ಓಟವನ್ನು ಹಿಮಾ ವರ್ಷದ 52.09 ಸೆಕೆಂಡುಗಳಲ್ಲಿ ಕ್ರಮಿಸಿ ಮೊದಲಿಗರಾದರು.
ತಿಂಗಳ ಅವಧಿಯೊಳಗೆ ಇದು ಅವರಿಗೆ ಐದನೇ ಚಿನ್ನ. ಏಪ್ರಿಲ್‌ನಲ್ಲಿ ದೋಹಾದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ನಂತರ ಅವರು ಮೊದಲ ಬಾರಿ 400 ಮೀ. ಓಟದಲ್ಲಿ ಪಾಲ್ಗೊಂಡರು. ಇದು ಈ ಓಟದಲ್ಲಿ ಅವರ ‘ವರ್ಷದ ಅತ್ಯುತ್ತಮ ಅವಧಿ’ ಎನಿಸಿತು. ಅವರ ವೈಯಕ್ತಿಕ ಶ್ರೇಷ್ಠ ಕಾಲಾವಧಿ 50.79 ಸೆಕೆಂಡು. ಇದನ್ನು ಜಕಾರ್ತಾ
ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತಾ ಮಟ್ಟವನ್ನು (51.80 ಸೆ.) ಸ್ವಲ್ವದರಲ್ಲೇ 19 ವರ್ಷದ ಅಸ್ಸಾಂ ಓಟಗಾರ್ತಿ ತಪ್ಪಿಸಿಕೊಂಡರು.
ಯುರೋಪ್‌ನಲ್ಲಿ ಜುಲೈ 2ರಂದು ಮೊದಲ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಹಿಮಾ ಗೆಲ್ಲುತ್ತಿರುವ ಐದನೇ ಚಿನ್ನ ಇದಾಗಿದೆ. ಅಂದು 200 ಮೀ. ಓಟವನ್ನು 23.65 ಸೆ.ಗಳಲ್ಲಿ ಪೂರೈಸಿ ಪೊಜ್ನಾನ್ ಗ್ರ್ಯಾನ್ ಪ್ರೀ ರೇಸ್ ಗೆದ್ದುಕೊಂಡಿದ್ದರು. ನಂತರ ಪೋಲೆಂಡ್‌ನಲ್ಲಿ ಜುಲೈ 7ರಂದು ಕುಂಟೊ ಅಥ್ಲೆಟಿಕ್ ಕೂಟದ 200 ಮೀ. ಓಟದಲ್ಲೂ (23.97 ಸೆ.) ಅಗ್ರಸ್ಥಾನ ಪಡೆದಿದ್ದರು. 13ರಂದು ಜೆಕ್ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ ಕೂಟದಲ್ಲೂ ಅವರು ಈದೇ ಓಟದಲ್ಲಿ ಚಿನ್ನ ಗೆದ್ದಿದ್ದರು. ಕಳೆದ ಬುಧವಾರ ತಬೊರ್ ಅಥ್ಲೆಟಿಕ್ ಕೂಟದಲ್ಲೂ ಯಶಸ್ಸಿನ ಓಟ ಮುಂದುವರಿಸಿದ್ದರು.
ಬೆನ್ನು ನೋವಿನಿಂದ ಅವರು ಏಷ್ಯನ್ ಅಥ್ಲೆಟಿಕ್ ಕೂಟದಲ್ಲಿ 400 ಮೀ. ಓಟವನ್ನು ಪೂರೈಸಲು ಪರದಾಡಿದ್ದರು.
ಪುರುಷರ 400 ಮೀ. ಹರ್ಡಲ್ಸ್ ಓಟವನ್ನು ಎಂ.ಪಿ.ಜಬಿರ್ 49.66 ಸೆ.ಗಳಲ್ಲಿ ಪೂರೈಸಿ ಚಿನ್ನ ಗೆದ್ದುಕೊಂಡರು. ಮೊಹಮದ್ ಅನಾಸ್ 200 ಮೀ. ಓಟದಲ್ಲಿ 29.95 ಸೆ.ಗಳ ಅವಧಿಯೊಡನೆ ಮೂರನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.