ನವದೆಹಲಿ: ಒಲಿಂಪಿಕ್ಸ್‌ನಲ್ಲಿ ನಾಲ್ಕು ದಶಕಗಳಿಂದ ನಾವು ಅನುಭವಿಸುತ್ತಿರುವ ಪದಕದ ಬರವನ್ನು ಈ ಬಾರಿ ನೀಗಿಸಲಿದ್ದೇವೆ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ತೋರುತ್ತಿರುವ ಸಾಮರ್ಥ್ಯವನ್ನೇ ಮುಂದುವರಿಸಿದರೆ ಪದಕ ಗೆಲ್ಲುವುದು ಕಷ್ಟವಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಒಟ್ಟು ಎಂಟು ಚಿನ್ನದ ಪದಕಗಳು ಇದುವರೆಗೆ ಭಾರತ ತಂಡದ ಮಡಿಲು ಸೇರಿವೆ.1980ರಲ್ಲಿ ಮಾಸ್ಕೊ ಕೂಟದಲ್ಲಿ ತಂಡವು ಕೊನೆಯ ಬಾರಿ ಚಿನ್ನ ಗೆದ್ದುಕೊಂಡಿತ್ತು.
ಆದರೆ ಕಳೆದ ಎರಡು ವರ್ಷಗಳಿಂದ ಭಾರತ ತಂಡದ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬಂದಿದೆ.
‘ಬಹಳ ದಿನಗಳ ನಂತರ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡಿರುವುದು ಖುಷಿಯ ಸಂಗತಿ. ಕಳೆದ 16 ತಿಂಗಳುಗಳಿಂದ ತಂಡವು ತೋರಿದ ಸಾಮರ್ಥ್ಯದ ಬಗ್ಗೆ ಸಂತಸವಿದೆ. ಇದೇ ಲಯದೊಂದಿಗೆ ಮುಂದುವರಿದರೆ ವಿಶ್ವದ ಯಾವುದೇ ತಂಡವನ್ನು ನಾವು ಸೋಲಿಸಬಲ್ಲೆವು‘ ಎಂದು ಮನ್‌ಪ್ರೀತ್ ನುಡಿದರು. ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ 100 ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಇದೇ ವರ್ಷದ ಜುಲೈ 23ರಿಂದ ಒಲಿಂಪಿಕ್ಸ್ ನಡೆಯಲಿದೆ.
ಇತ್ತೀಚೆಗೆ ಕೊನೆಗೊಂಡ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಭಾರತ ತಂಡವು ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡದ ಎದುರು ಮೇಲುಗೈ ಸಾಧಿಸಿತ್ತು.
‘ಈಗ ತಂಡದ ಉತ್ಸಾಹ ವೃದ್ಧಿಸಿದೆ. ನಮ್ಮ ಆಟವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಒಲಿಂಪಿಕ್ಸ್‌ಗೆ ಮೊದಲು ಲಭಿಸುವ ಎಲ್ಲ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು‘ ಎಂದು ಮನ್‌ಪ್ರೀತ್ ನುಡಿದರು. 2016ರ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಎಂಟನೇ ಸ್ಥಾನ ಗಳಿಸಿತ್ತು.
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡ ಮನ್‌ಪ್ರೀತ್ ರೀತಿಯ ಅಭಿಪ್ರಾಯಗಳನ್ನೇ ವ್ಯಕ್ತಪಡಿಸಿದ್ದಾರೆ.
‘ಈ ವರ್ಷದ ಆರಂಭದಲ್ಲಿ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಅರ್ಜೆಂಟೀನಾ ಹಾಗೂ ಜರ್ಮನಿ ತಂಡದ ಎದುರು ನಾವು ಆಡಿದ ರೀತಿ ಖುಷಿ ನೀಡಿದೆ. ನಾವು ಯಾವುದೇ ಪಂದ್ಯ ಗೆಲ್ಲಲಿಲ್ಲವಾದರೂ ಗರಿಷ್ಠ ರ‍್ಯಾಂಕಿನ ತಂಡಗಳ ಎದುರು ಸಮಾನ ಹೋರಾಟ ನಡೆಸಿದವು. ಜರ್ಮನಿಯಿಂದ ಹಿಂದಿರುಗಿದ ಬಳಿಕ ತಾಂತ್ರಿಕತೆ ಹಾಗೂ ‘ಮ್ಯಾಚ್ ಫಿನಿಶಿಂಗ್‘ ತಂತ್ರಗಳ ಸುಧಾರಣೆಗೆ ಶ್ರಮಿಸುತ್ತಿದ್ದೇವೆ‘ ಎಂದು ರಾಣಿ ಹೇಳಿದ್ದಾರೆ.
‘ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ವಿಶ್ವಾಸದಲ್ಲಿದ್ದೇವೆ’ ಎಂದು ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.