ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ | ಮಹಿಳಾ ಹಾಕಿ: ನೀಗುವುದೆ ಒಂದೂವರೆ ದಶಕದ ಪದಕ ಬರ?

ಭಾರತ ತಂಡಕ್ಕೆ ಇಂದು ಘಾನಾ ಮೊದಲ ಎದುರಾಳಿ

ಪಿಟಿಐ
Published 28 ಜುಲೈ 2022, 19:30 IST
Last Updated 28 ಜುಲೈ 2022, 19:30 IST
ಗುರ್ಜಿತ್ ಕೌರ್‌– ಪಿಟಿಐ ಚಿತ್ರ
ಗುರ್ಜಿತ್ ಕೌರ್‌– ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌:ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 16 ವರ್ಷಗಳಿಂದ ಪದಕದ ಬರ ಎದುರಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡವು ನಿರಾಸೆಯನ್ನು ಮರೆಯುವ ತವಕದಲ್ಲಿದೆ.

ಸವಿತಾ ಪೂನಿಯಾ ನಾಯಕತ್ವದ ತಂಡವು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಶುಕ್ರವಾರ ಘಾನಾ ಸವಾಲು ಎದುರಿಸಲಿದ್ದು ಶುಭಾರಂಭದ ನಿರೀಕ್ಷೆಯಲ್ಲಿದೆ.

2016ರ ಮೆಲ್ಬರ್ನ್‌ ಕೂಟದಲ್ಲಿ ತಂಡಕ್ಕೆ ಬೆಳ್ಳಿ ಪದಕ ಒಲಿದಿತ್ತು. 1998ರ ಕೂಟದಲ್ಲಿ ಹಾಕಿಯನ್ನು ಸೇರಿಸಲಾಗಿತ್ತು. 2002ರ ಮ್ಯಾಂಚೆಸ್ಟರ್ ಆವೃತ್ತಿಯಲ್ಲಿ ತಂಡ ಚಿನ್ನದ ಪದಕ ಜಯಿಸಿತ್ತು.

ADVERTISEMENT

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದಿಂದ ವಂಚಿತವಾಗಿದ್ದ ತಂಡವು ಇಲ್ಲಿ ‘ಪೋಡಿಯಂ ಫಿನಿಶ್‌‘ ಹಂಬಲದಲ್ಲಿದೆ.ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇಂಗ್ಲೆಂಡ್‌, ಕೆನಡಾ, ವೇಲ್ಸ್ ಮತ್ತು ಘಾನಾ ಈ ಗುಂಪಿನಲ್ಲಿವೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಕೂಟದಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಬರಿಗೈಯಲ್ಲಿ ಹಿಂದಿರುಗಿದ್ದವು. ಕಂಚಿನ ಪದಕದ ಸುತ್ತಿನಲ್ಲಿ ಮಹಿಳಾ ತಂಡವು 0–6ರಿಂದ ಇಂಗ್ಲೆಂಡ್‌ ಎದುರು ಎಡವಿ ನಾಲ್ಕನೇ ಸ್ಥಾನ ಗಳಿಸಿತ್ತು.

ಸ್ಪೇನ್‌ ಮತ್ತು ನೆದರ್ಲೆಂಡ್ಸ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಸವಿತಾ ಪಡೆ ಒಂಬತ್ತನೇ ಸ್ಥಾನ ಗಳಿಸಿತ್ತು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತದ ಮಹಿಳೆಯರು ಪ್ರೊ ಲೀಗ್‌ನಲ್ಲೂ ಉತ್ತಮ ಸಾಮರ್ಥ್ಯ ತೋರಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಆದರೆ ಇಲ್ಲಿ ಪದಕ ಗಳಿಸಬೇಕಾದರೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತ, ತನಗಿಂತ ಮೇಲಿನ ಕ್ರಮಾಂಕದಲ್ಲಿರುವ ಆಸ್ಟ್ರೇಲಿಯಾ(3), ಇಂಗ್ಲೆಂಡ್‌ (5) ಮತ್ತು ನ್ಯೂಜಿಲೆಂಡ್‌ (8) ತಂಡಗಳ ಸವಾಲು ಮೀರಬೇಕಾಗಿದೆ.

ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ಎಡವುತ್ತಿರುವ ಭಾರತ, ಆ ವಿಭಾಗದಲ್ಲಿ ಸುಧಾರಣೆ ಕಂಡುಕೊಂಡರೆ ಘಾನಾ ಎದುರು ಜಯ ಸುಲಭವಾಗಲಿದೆ. ಗೋಲ್‌ಕೀಪಿಂಗ್‌ನಲ್ಲಿ ನಾಯಕಿ ಸವಿತಾ ಮತ್ತು ಡ್ರ್ಯಾಗ್‌ಫ್ಲಿಕರ್ ಗುರ್ಜಿತ್ ಕೌರ್ ಮೇಲೆ ನಿರೀಕ್ಷೆ ಹೆಚ್ಚಿದೆ.

'ಎ' ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೆನಡಾ ತಂಡವು ವೇಲ್ಸ್ ಎದುರು ಆಡಲಿದೆ.

ಕಳೆದ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ಚಿನ್ನ ಜಯಿಸಿತ್ತು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಸಾಧನೆ

ವರ್ಷ ಸ್ಥಳ ಸ್ಥಾನ/ಪದಕ
1998 ಕ್ವಾಲಾಲಂಪುರ 4
2002 ಮ್ಯಾಂಚೆಸ್ಟರ್ ಚಿನ್ನ
2006 ಮೆಲ್ಬರ್ನ್‌ ಬೆಳ್ಳಿ
2010 ನವದೆಹಲಿ 5
2014 ಗ್ಲಾಸ್ಗೊ 5
2018 ಗೋಲ್ಡ್‌ಕೋಸ್ಟ್ 4

ವಿಶ್ವ ರ‍್ಯಾಂಕಿಂಗ್‌
ಭಾರತ:
9
ಘಾನಾ:30
ಪಂದ್ಯ ಆರಂಭ: ಮಧ್ಯಾಹ್ನ 2
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.