ನಾಪೋಕ್ಲು (ಕೊಡಗು ಜಿಲ್ಲೆ): ಕುಲ್ಲೇಟಿರ, ಚೆಪ್ಪುಡಿರ, ಚೇದಂಡ ಹಾಗೂ ಬೋವ್ವೆರಿಯಂಡ ತಂಡಗಳು, ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿ, ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಚೇತನ್ (2 ಗೋಲು), ಗಗನ್ ಬೆಳ್ಯಪ್ಪ (1), ಕಾರ್ಯಪ್ಪ (1) ಅವರ ಗೋಲುಗಳ ಬಲದಿಂದ 4–0 ಅಂತರದಲ್ಲಿ ಚೆಕ್ಕೆರ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಕುಲ್ಲೇಟಿರ ತಂಡವು ಐನಂಡ ವಿರುದ್ದ 3–0 ಅಂತರದಿಂದ ಗೆಲುವು ಪಡೆಯಿತು. ಕುಲ್ಲೇಟಿರ ಪರ ರೋಷನ್, ಸಚಿತ್ ಹಾಗೂ ಅರ್ಜುನ್ ತಲಾ ಒಂದು ಗೋಲು ಗಳಿಸಿದರು.
ಚೇಂದಂಡ ತಂಡವು ಕರಿನೆರವಂಡ ತಂಡವನ್ನು 2–1 ಗೋಲುಗಳಿಂದ, ಬೊವ್ವೇರಿಯಂಡ ತಂಡವು ಐಚೆಟ್ಟಿರ ತಂಡವನ್ನು 2–1 ಅಂತರದಿಂದ ಮಣಿಸಿ ಎಂಟರ ಘಟ್ಟ ತಲುಪಿದವು.
ಒಲಿಂಪಿಕ್ ಕೂಟದಲ್ಲಿ ದೇಶ ಪ್ರತಿನಿಧಿಸಿದ್ದ ಮನೆಯಪಂಡ ಅಶ್ವಿನಿ ನಾಚಪ್ಪ, ಬಾಳೆಯಡ ಕೆ.ಸುಬ್ರಮಣಿ ಹಾಗೂ ಚೇಂದಂಡ ನಿಕಿನ್ ತಿಮ್ಮಯ್ಯ ಪಂದ್ಯಗಳನ್ನು ವೀಕ್ಷಿಸಿದರು. 8 ತಂಡಗಳು ಗುರುವಾರ ನಡೆವ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೆಣೆಸಲಿವೆ. ಶನಿವಾರ ಸೆಮಿಫೈನಲ್ ಹಾಗೂ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.