ಲಂಡನ್: ಭಾರತಕ್ಕೆ ಹೆಚ್ಚಿನ ಪದಕ ತಂದುಕೊಡುವಂಥ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್ ಮತ್ತು ಶೂಟಿಂಗ್ ಸ್ಪರ್ಧೆಗಳನ್ನು 2026ರ ಗ್ಲಾಸ್ಗೊ ಕಾಮನ್‌ವೆಲ್ತ್ ಕ್ರೀಡೆಗಳಿಂದ ಕೈಬಿಡಲಾಗಿದೆ. ಕ್ರೀಡೆಗಳನ್ನು ‘ಬಜೆಟ್ ಸ್ನೇಹಿ’ (ವೆಚ್ಚ ಕಡಿಮೆ) ಮಾಡುವ ಉದ್ದೇಶದಿಂದ 10 ವಿವಿಧ ಆಟಗಳಿಗೆ ಸೀಮಿತಗೊಳಿಸಲಾಗಿದೆ.
ಟೇಬಲ್ ಟೆನಿಸ್, ಸ್ಕ್ವಾಶ್ ಮತ್ತು ಟ್ರಯಥ್ಲಾನ್‌ಗೂ 2026ರ ಕ್ರೀಡೆಗಳಿಂದ ಕೊಕ್ ನೀಡಲಾಗಿದೆ. ವೆಚ್ಚ ಮತ್ತು ಪ್ರಯಾಣದ ಸಮಯ ಉಳಿಸಲು ಕೇವಲ ನಾಲ್ಕು ತಾಣಗಳಲ್ಲಿ ಮಾತ್ರ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
2022ರ ಬರ್ಮಿಂಗ್‌ಹ್ಯಾಮ್ ಕೂಟದಲ್ಲಿ ಇದ್ದ ಸ್ಪರ್ಧೆಗಳಿಗೆ ಹೋಲಿಸಿದರಲ್ಲಿ, ಗ್ಲಾಸ್ಗೊ ಕ್ರೀಡೆಗಳಲ್ಲಿ 9 ಕ್ರೀಡೆಗಳು ಕಡಿಮೆಯಾಗಲಿವೆ. ಸ್ಕಾಟ್ಲೆಂಡ್ ದೇಶದ ಗ್ಲಾಸ್ಗೊ ನಗರದಲ್ಲಿ ಕಾಮನ್‌ವೆಲ್ತ್ ಕ್ರೀಡೆಗಳು 2026ರ ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆಯಲಿವೆ. 12 ವರ್ಷಗಳ ನಂತರ ಆತಿಥ್ಯ ಗ್ಲಾಸ್ಗೊ ನಗರಕ್ಕೆ ಮರಳಿದೆ.
‘ಗ್ಲಾಸ್ಗೊ ಕೂಟದಲ್ಲಿ 10 ಕ್ರೀಡೆಗಳು ಇರಲಿವೆ. ಆಟಕ್ಕೆ ಬಹು ಕ್ರೀಡೆಗಳ ಸ್ಪರ್ಶ ಇರುವಂತೆ ಖಚಿತಪಡಿಸುವುದು, ಹಣಕಾಸು ನಿರ್ವಹಣೆ ಇವೆರಡರ ನಡುವೆ ಸಮತೋಲನ ಕಾಪಾಡಲಾಗು ತ್ತಿದೆ’ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಹೇಳಿಕೆಯಲ್ಲಿ ತಿಳಿಸಿದೆ.
‘ಮುಂದಿನ ಕ್ರೀಡೆಗಳಲ್ಲಿ ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ (ಟ್ರ್ಯಾಕ್ ಅಂಡ್ ಫೀಲ್ಡ್), ಈಜು ಮತ್ತು ಪ್ಯಾರಾ ಈಜು, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್ ಮತ್ತು ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್‌ಬಾಲ್, ವೇಟ್‌ಲಿಫ್ಟಿಂಗ್ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್, ಬಾಕ್ಸಿಂಗ್, ಜೂಡೊ, ಬೌಲ್ಸ್ ಮತ್ತು ಪ್ಯಾರಾ ಬೌಲ್ಸ್, 3x3 ಬ್ಯಾಸ್ಕೆಟ್‌ಬಾಲ್ ಮತ್ತು 3x3 ವೀಲ್‌ಚೇರ್ ಬ್ಯಾಸ್ಕೆಟ್‌ಬಾಲ್ ಇರಲಿದೆ’ ಎಂದು ಹೇಳಿಕೆ ತಿಳಿಸಿದೆ.
ಅಥ್ಲೀಟುಗಳು ಮತ್ತು ನೆರವು ಸಿಬ್ಬಂದಿಗೆ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಲು ನಿರ್ಧರಿಸಲಾಗಿದೆ.
ಭಾರತದ ಪದಕ ಸಾಧ್ಯತೆಗೆ ಹಿನ್ನಡೆ:
ಭಾರತ ಪ್ರಬಲವಾಗಿರುವ ಕ್ರೀಡೆಗಳಿಗೆ ಅರ್ಧಚಂದ್ರ ನೀಡಿರುವ ಕಾರಣ ದೇಶ ಪಡೆಯಬಹುದಾದ ಪದಕಗಳ ಸಂಖ್ಯೆ ಕಡಿಮೆಯಾಗಲಿದೆ. ನಾಲ್ಕು ವರ್ಷ ಹಿಂದೆ ಬರ್ಮಿಂಗ್‌ಹ್ಯಾಮ್ ಕ್ರೀಡೆಗಳಲ್ಲೇ ಶೂಟಿಂಗ್ ತೆಗೆದುಹಾಕಲಾಗಿತ್ತು. ಸಾಗಣೆ ವೆಚ್ಚ, ಸಮಸ್ಯೆಗಳ ಕಾರಣ ನೀಡಲಾಗಿದ್ದು, ಮುಂದೆ ಸೇರ್ಪಡೆಯಾಗುವ ಸಾಧ್ಯತೆಯೂ ಇರಲಿಲ್ಲ.
ಶೂಟಿಂಗ್ ಜೊತೆಗೆ ಆರ್ಚರಿಯ ನಿರ್ಲಕ್ಷ್ಯ ಮುಂದುವರಿದಿದೆ. 2010ರ ದೆಹಲಿ ಕ್ರೀಡೆಗಳಲ್ಲಿ ಕೊನೆಯ ಬಾರಿ ಆರ್ಚರಿ ಸ್ಪರ್ಧೆ ನಡೆದಿತ್ತು.
ಈ ಹಿಂದೆ, 2014ರ ಗ್ಲಾಸ್ಗೊ ಕ್ರೀಡೆಗಳಲ್ಲಿ, ಶೂಟಿಂಗ್ ಸ್ಪರ್ಧೆ ದಂಡೀ ಪಟ್ಟಣದ ಬ್ಯಾರಿ ಬಡ್ಡಾನ್ ಸೆಂಟರ್‌ನಲ್ಲಿ ನಡೆದಿತ್ತು. ಅದು ಗ್ಗಾಸ್ಗೊದಿಂದ 100 ಕಿ.ಮೀ. ದೂರದಲ್ಲಿದೆ.
ಭಾರತದ 2022ರ ಬರ್ಮಿಂಗ್‌ಹ್ಯಾಮ್ ಕ್ರೀಡೆಗಳಿಗೆ 210 ಮಂದಿಯ ತಂಡ ಕಳುಹಿಸಿತ್ತು. ಆ ಕ್ರೀಡೆಗಳಲ್ಲಿ ಭಾರತ 61 ಪದಕಗಗಳನ್ನು ಗೆದ್ದುಕೊಂಡಿತ್ತು. ಈ ಪದಕಗಳಲ್ಲಿ 30 ಪದಕಗಳು, ಮುಂದಿನ ಕ್ರೀಡೆಗಳಲ್ಲಿ ಕೈಬಿಟ್ಟಿರುವ ಸ್ಪರ್ಧೆಗಳಿಂದ ಬಂದಿದ್ದವು.
ಹಾಕಿ ವಿಶ್ವಕಪ್ ಹತ್ತಿರದಲ್ಲಿರುವಾಗಲೇ, ಕಾಮನ್‌ವೆಲ್ತ್ ಕ್ರೀಡೆ ನಡೆಯುತ್ತಿರುವುದು ಸಹ ಈ ಆಟವನ್ನು ಹೊರಗಿಡಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಕಿ ವಿಶ್ವಕಪ್ ನೆದರ್ಲೆಂಡ್ಸ್‌ನ
ಆಮ್‌ಸ್ಟೆಲ್ವೀನ್ ಮತ್ತು ಬೆಲ್ಜಿಯಂನ ವಾವ್ರೆಯಲ್ಲಿ ಆಗಸ್ಟ್ 15 ರಿಂದ 30ರವರೆಗೆ ನಡೆಯಲಿದೆ.
2026ರ ಕ್ರೀಡೆಗಳು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಿತ್ತು. ಆದರೆ ಏರುತ್ತಿರುವ ವೆಚ್ಚದ ಕಾರಣ ಮುಂದಿಟ್ಟು ಅದು ಆತಿಥ್ಯದಿಂದ ಹಿಂದೆಸರಿದಿತ್ತು.
ತಂಡ ಕಳಿಸಬಾರದು: ಗೋಪಿಚಂದ್, ವಿಮಲ್ ಕುಮಾರ್ ಆಕ್ರೋಶ
ನವದೆಹಲಿ: ಗ್ಲಾಸ್ಗೊದಲ್ಲಿ 2026ರಲ್ಲಿ ನಿಗದಿಯಾಗಿರುವ 23ನೇ ಕಾಮನ್‌ವೆಲ್ತ್ ಕ್ರೀಡೆಗಳಿಂದ ಬ್ಯಾಡ್ಮಿಂಟನ್ ಆಟ ಕೈಬಿಟ್ಟಿರುವುದಕ್ಕೆ ಭಾರತದ ದಿಗ್ಗಜರಾದ ಪುಲ್ಲೇಲ ಗೋಪಿಚಂದ್, ವಿಮಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಕ್ರೀಡಾ ಬೆಳವಣಿಗೆ ಕುಂಠಿತಗೊಳಿಸುವ ಉದ್ದೇಶ ಹೊಂದಿರುವ ಈ ಕೂಟಕ್ಕೆ ಭಾರತವು ಯಾವುದೇ ತಂಡ ಕಳಿಸಬಾರದು ಎಂದು ಒತ್ತಾಯಿಸಿದ್ದಾರೆ.
‘ಕಾಮನ್‌ವೆಲ್ತ್ ಕೀಡೆಗಳ (ಸಿಡಬ್ಲ್ಯುಜಿ) ಅಗತ್ಯವೇ ಇಲ್ಲ. ನನ್ನ ಪ್ರಕಾರ ಇದನ್ನು ನಿಲ್ಲಿಸುವುದು ಒಳಿತು. ಸಿಡಬ್ಲ್ಯುಜಿ ತನ್ನ ವರ್ಚಸ್ಸು ಕಳೆದುಕೊಂಡಿದೆ. ಅದರ ಅಗತ್ಯವೇ ಇಲ್ಲ’ ಎಂದು ಮಾಜಿ ಕೋಚ್ ವಿಮಲ್ ಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಈ ನಿರ್ಧಾರ ನಿರಾಸೆ ಮೂಡಿಸಿದೆ. ಭಾರತದಂಥ ದೇಶಗಳ ಪ್ರಗತಿಗೆ ಅಡ್ಡಿ ಉಂಟು ಮಾಡುವ ನಿರ್ಧಾರ ಇದು’ ಎಂದು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಗೋಪಿಚಂದ್ ಅಭಿಪ್ರಾಯ
ಪಟ್ಟಿದ್ದಾರೆ.
‘ಈ ನಿರ್ಧಾರವನ್ನು ಭಾರತ ಬಲವಾಗಿ ಆಕ್ಷೇಪಿಸಬೇಕು. ಸಂಬಂಧಪಟ್ಟವರ ಜೊತೆ ಈ ಬಗ್ಗೆ ಮಾತನಾಡಿ ನಮ್ಮ ಧ್ವನಿ ಎತ್ತಬೇಕು’ ಎಂದಿದ್ದಾರೆ.
ಸ್ಕ್ವಾಷ್ ಕೈಬಿಟ್ಟಿರುವ ಕಾರಣ ಒಂದು ಹೆಜ್ಜೆ ಹಿಂದೆ ಇಟ್ಟಂತಾಗಿದೆ ಎಂದು ಭಾರತದ ಶ್ರೇಷ್ಠ ಆಟಗಾರ ಸೌರವ್ ಘೋಷಾಲ್ ಅಭಿಪ್ರಾಯಪಟ್ಟಿದ್ದಾರೆ. 2028ರ ಒಲಿಂಪಿಕ್ಸ್‌ಗೆ ಈ ಕ್ರೀಡೆ ಸೇರ್ಪಡೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.