ಮೈಸೂರು: ಸಿಂಥೆಟಿಕ್ ಟರ್ಫ್ ಮೈದಾನಗಳ ಕೊರತೆಯಿಂದಾಗಿ ದೇಶದಲ್ಲಿ ಹಾಕಿ ಕ್ರೀಡೆ ಬಡವಾಗಿದೆ ಎಂದು ‘ಹಾಕಿ ಮಾಂತ್ರಿಕ’ ಧ್ಯಾನ್‌ಚಂದ್ ಅವರ ಪುತ್ರ ಅಶೋಕ್ ಕುಮಾರ್ ಅಭಿಪ್ರಾಯಪಟ್ಟರು.
ಹಾಕಿ ಮೈಸೂರು ವತಿಯಿಂದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಧ್ಯಾನ್‌ಚಂದ್ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಟೂರ್ನಿ’ಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮಲ್ಲಿ ಹಾಕಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಸುಸಜ್ಜಿತ ಮೈದಾನಗಳು ಇಲ್ಲ. ಇದರಿಂದ ಆಟಗಾರರಿಗೆ ಆಡಲು ಅವಕಾಶಗಳು ಸಿಗುತ್ತಿಲ್ಲ. ಅತ್ಯುತ್ತಮ ಆಟಗಾರರಿದ್ದರೂ ಅವರು ಬೆಳಕಿಗೆ ಬರುತ್ತಿಲ್ಲ’ ಎಂದು ಖೇದ ವ್ಯಕ್ತಪಡಿಸಿದರು.
ಜರ್ಮನಿ, ನೆದರ್ಲೆಂಡ್ಸ್‌ನಂತಹ ಸಣ್ಣ ದೇಶಗಳಲ್ಲಿ 500 ರಿಂದ 600 ರಷ್ಟು ಟರ್ಫ್ ಮೈದಾನಗಳು ಇವೆ. ನಮ್ಮಲ್ಲಿ ಒಂದು ರಾಜ್ಯದಲ್ಲಿ ಎರಡು ಅಥವಾ ಮೂರಕ್ಕಿಂತ ಹೆಚ್ಚು ಟರ್ಫ್ ಮೈದಾನಗಳು ಇಲ್ಲದಿರುವುದು ನಿರಾಸೆಯ ಸಂಗತಿ ಎಂದು ಅವರು ತಿಳಿಸಿದರು.
‘ನನ್ನ ತಂದೆ ಹಲವು ಆಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಆವರು ಆಡುತ್ತಿದ್ದ ಪಂದ್ಯಗಳ ವೀಕ್ಷಕ ವಿವರಣೆಯನ್ನು ರೇಡಿಯೊದಲ್ಲಿ ಕೇಳುತ್ತಾ ರೋಮಾಂಚನಗೊಳ್ಳುತ್ತಿದ್ದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಎಂದಾಗ ಈಗಲೂ ಅವರ ಹೆಸರನ್ನು ಸ್ಮರಿಸುತ್ತಾರೆ’ ಎಂದು ನುಡಿದರು.
‘ಹಾಕಿ ಆಟದ ಕೌಶಲ ನಿಮ್ಮೊಳಗಿನಿಂದಲೇ ಹೊರಹೊಮ್ಮಬೇಕು. ಇನ್ನೊಬ್ಬರಂತೆ ಆಗಲು ಪ್ರಯತ್ನಿಸಬೇಡಿ. ಮೈದಾನದಲ್ಲಿ ಶೇ 100 ರಷ್ಟು ಪ್ರಯತ್ನ ನೀಡಿ’ ಎಂದು ಯುವ ಆಟಗಾರರಿಗೆ ಕಿವಿಮಾತು ಅಶೋಕ್‌ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.