ನವದೆಹಲಿ: ಜುಲೈ 16 ರಿಂದ ಆರಂಭವಾಗುವ ಯುರೋಪ್ ಪ್ರವಾಸಕ್ಕೆ 20 ಮಂದಿಯ ರಾಷ್ಟ್ರೀಯ ಮಹಿಳಾ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ. ಪ್ರವಾಸದಲ್ಲಿ ಭಾರತವು ಜರ್ಮನಿಯಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನಂತರ ಸ್ಪೇನ್‌ನಲ್ಲಿ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಆಡಲಿದೆ.
ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಸಿದ್ಧತೆಯ ಭಾಗವಾಗಿ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.
ಜರ್ಮನಿಯಲ್ಲಿ ಜುಲೈ 16 ರಿಂದ 19ರವರೆಗೆ ಭಾರತವು ಮೂರು ಪಂದ್ಯಗಳನ್ನು ಆಡಲಿದ್ದು, ಒಂದು ಪಂದ್ಯವು ಚೀನಾ ವಿರುದ್ಧ, ಎರಡು ಪಂದ್ಯಗಳನ್ನು ಆತಿಥೇಯರ ವಿರುದ್ಧ ಆಡಲಿದೆ. ನಂತರ ಸ್ಪೇನ್‌ಗೆ ತೆರಳಲಿರುವ ತಂಡವು ಜುಲೈ 25 ರಿಂದ 30ರವರೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆತಿಥೇಯರ ವಿರುದ್ಧ ಪಂದ್ಯಗಳನ್ನು ಆಡಲಿದೆ. ಸ್ಪ್ಯಾನಿಷ್ ಹಾಕಿ ಫೆಡರೇಷನ್‌ನ 100ನೇ ವರ್ಷದ ಅಂಗವಾಗಿ ಟೆರಸಾದಲ್ಲಿ ಈ ನಾಲ್ಕು ರಾಷ್ಟ್ರಗಳ ಟೂರ್ನಿ ನಡೆಯಲಿದೆ.
ಮೇ ತಿಂಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಗೋಲ್‌ಕೀಪರ್ ಸವಿತಾ ತಂಡದ ನೇತೃತ್ವ ವಹಿಸಿದ್ದು, ದೀಪ್ ಗ್ರೇಸ್ ಎಕ್ಕಾ ಉಪನಾಯಕಿ ಆಗಿದ್ದಾರೆ. ಈ ಹಿಂದಿನ ಪ್ರವಾಸಕ್ಕೆ ವಿಶ್ರಾಂತಿ ಪಡೆದಿದ್ದ ಅನುಭವಿ ಡಿಫೆಂಡರ್ ಸುಶೀಲಾ ಚಾನು ಪುಕ್ರಾಂಬಮ್ ಮತ್ತು ಫಾರ್ವರ್ಡ್ ದೀಪಿಕಾ ತಂಡಕ್ಕೆ ಮರಳಿದ್ದಾರೆ.
ತಂಡ ಇಂತಿದೆ
ಗೋಲ್‌ಕೀಪರ್ಸ್: ಸವಿತಾ (ನಾಯಕಿ), ಬಿಚುದೇವಿ ಖರಿಬಮ್. ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪ ನಾಯಕಿ), ನಿಕ್ಕಿ ಪ್ರಧಾನ್, ಇಷಿಕಾ ಚೌಧರಿ, ಉದಿತಾ, ಸುಶೀಲಾ ಚಾನು ಪುಕ್ರಾಂಬಮ್.
ಮಿಡ್‌ಫೀಲ್ಡರ್ಸ್: ನಿಶಾ, ಮೋನಿಕಾ, ಸಲಿಮಾ ಟೆಟೆ, ನೇಹಾ, ನವನೀತ್ ಕೌರ್, ಸೋನಿಕಾ, ಬಲಜೀತ್ ಕೌರ್, ವೈಷ್ಣವಿ ವಿಠ್ಠಲ್ ಫಾಲ್ಕೆ, ಜ್ಯೋತಿ ಚೆಟ್ರಿ.
ಫಾರ್ವರ್ಡ್ಸ್: ಲಾಲ್‌ರೆಮ್ ಸಿಯಾಮಿ, ವಂದನಾ ಕಟಾರಿಯಾ, ಸಂಗೀತಾ ಕುಮಾರಿ ಮತ್ತು ದೀಪಿಕಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.