ADVERTISEMENT

ಒಲಿಂಪಿಕ್‌ ಪೂರ್ವ ಸಿದ್ಧತಾ ಶಿಬಿರಕ್ಕೆ 27 ಮಂದಿ ಆಯ್ಕೆ ಮಾಡಿದ ಹಾಕಿ ಇಂಡಿಯಾ

ಅನುಭವಿ ಆಟಗಾರರಿಗೆ ಮಣೆಹಾಕಿದ ಹಾಕಿ ಇಂಡಿಯಾ

ಪಿಟಿಐ
Published 20 ಜೂನ್ 2024, 13:29 IST
Last Updated 20 ಜೂನ್ 2024, 13:29 IST
<div class="paragraphs"><p>ಒಲಿಂಪಿಕ್‌</p></div>

ಒಲಿಂಪಿಕ್‌

   

ಬೆಂಗಳೂರು: ಒಲಿಂಪಿಕ್‌ ಪೂರ್ವ ರಾಷ್ಟ್ರೀಯ ಶಿಬಿರಕ್ಕೆ 27 ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಗುರುವಾರ ಪ್ರಕಟಿಸಿದೆ. ಉತ್ತಮ ಪ್ರದರ್ಶನ ನೀಡಿರುವ ಹಾಲಿ ಆಟಗಾರರ ಮೇಲೆಯೇ ಹಾಕಿ ಇಂಡಿಯಾ ಹೆಚ್ಚಿನ ಭರವಸೆ ಇಟ್ಟಿದೆ.

ಈ ಶಿಬಿರ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ಜೂನ್ 21 ರಿಂದ ಜುಲೈ 8 ರವರೆಗೆ ನಡೆಯಲಿದೆ. ಒಲಿಂಪಿಕ್ಸ್‌ ಮುಂದಿನ ತಿಂಗಳ 26ರಂದು ಆರಂಭವಾಗಲಿದ್ದು, ಆಗಸ್ಟ್‌ 11ರಂದು ಮುಕ್ತಾಯಗೊಳ್ಳಲಿದೆ.

ADVERTISEMENT

ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ‘ಬಿ’ ಗುಂಪಿನಲ್ಲಿದೆ. ಬೆಲ್ಜಿಯಂ, ಆರ್ಜೆಂಟೀನಾ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್‌ ಗುಂಪಿನಲ್ಲಿರುವ ಇತರ ತಂಡಗಳು. ಟೋಕಿಯೊ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತ ತನ್ನ ಮೊದಲ ಪಂದ್ಯವನ್ನು ಜುಲೈ 27ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

ಪ್ರೊ ಲೀಗ್‌ನಲ್ಲಿ ಉತ್ತಮ ಪ್ರದರ್ಶನದ ನಂತರ ಭಾರತ ಈಗ ರಾಷ್ಟ್ರೀಯ ಶಿಬಿರಕ್ಕೆ ಮರಳುತ್ತಿದೆ. ಪ್ರೊ ಲೀಗ್‌ನಲ್ಲಿ ಭಾರತ 16 ಪಂದ್ಯಗಳಿಂದ 24 ಪಾಯಿಂಟ್ಸ್ ಕಲೆಹಾಕಿದ್ದು ನಾಲ್ಕನೇ ಸ್ಥಾನದಲ್ಲಿದೆ.‌

ಮುನ್ಪಡೆ ಆಟಗಾರ ದಿಲ್‌ಪ್ರೀತ್ ಸಿಂಗ್‌ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವ ಪ್ರಮುಖರೆನಿಸಿದ್ದಾರೆ.

‘ಈ ಶಿಬಿರದ ಮೂಲಕ ನಾವು ಮಹತ್ವದ ಕೂಟಕ್ಕೆ ತರಬೇತಿ ಆರಂಭಿಸಲಿದ್ದೇವೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನ ನಾವು ಅತ್ಯುತ್ತಮ ಲಯದಲ್ಲಿರಬೇಕಾದ ಅಗತ್ಯವಿದೆ. 2023/24ರ ಎಫ್‌ಐಚ್‌ ಪ್ರೊ ಲೀಗ್‌ನಲ್ಲಿ ಆಟಗಾರರು ಸಾಕಷ್ಟು ಕಲಿತಿದ್ದಾರೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಕ್ರೇಗ್ ಫುಲ್ಟನ್‌ ಪ್ರತಿಕ್ರಿಯಿಸಿದರು.

‘ನಾವೆಲ್ಲಿ ಸುಧಾರಣೆ ಕಾಣಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರೊ ಲೀಗ್ ನೆರವಾಯಿತು. ನಾವು ಅಂಥ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಕಷ್ಟು ಸಮಯವಿದೆ’ ಎಂದು ಹೇಳಿದರು.

ಶಿಬಿರಕ್ಕೆ ಆಯ್ಕೆಯಾದ 27 ಆಟಗಾರರು ಕೆಳಕಂಡಂತೆ ಇದ್ದಾರೆ.

ಗೋಲ್‌ ಕೀಪರ್ಸ್‌: ಕೃಷ್ಣ ಬಹಾದ್ದೂರ್ ಪಾಠಕ್‌, ಪಿ.ಆರ್.ಶ್ರೀಜೇಶ್, ಸೂರಜ್ ಕರ್ಕೇರಾ. ಡಿಫೆಂಡರ್ಸ್‌: ಹರ್ಮನ್‌ಪ್ರೀತ್ ಸಿಂಗ್‌, ಜರ್ಮನ್‌ಪ್ರೀತ್ ಸಿಂಗ್‌, ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್, ಸಂಜಯ್‌, ಆಮಿರ್ ಅಲಿ. ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್‌, ವಿವೇಕ್ ಸಾಗರ್ ಪ್ರಸಾದ್‌, ಸುಮಿತ್‌, ಶಂಶೇರ್ ಸಿಂಗ್‌, ನೀಲಕಂಠ ಶರ್ಮಾ, ರಾಜಕುಮಾರ್ ಪಾಲ್‌, ವಿಷ್ಣುಕಾಂತ ಸಿಂಗ್, ಆಕಾಶ್‌ದೀಪ್‌ ಸಿಂಗ್, ಮೊಹಮ್ಮದ್ ರಾಹಿಲ್ ಮೌಸೀನ್.

ಫಾರ್ವರ್ಡ್ಸ: ಮನ್‌ದೀಪ್ ಸಿಂಗ್‌, ಲಲಿತ್‌ ಕುಮಾರ್ ಉಪಾಧ್ಯಾಯ, ಅಭಿಷೇಕ್‌, ದಿಲ್‌ಪ್ರೀತ್ ಸಿಂಗ್‌, ಸುಖಜೀತ್ ಸಿಂಗ್‌, ಗುರ್ಜಂತ್ ಸಿಂಗ್‌, ಬಾಬಿ ಸಿಂಗ್ ಧಾಮಿ, ಅರಿಜಿತ್ ಸಿಂಗ್ ಹುಂಡಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.