ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಸೋಲು

ಪಿಟಿಐ
Published 18 ಮೇ 2023, 14:26 IST
Last Updated 18 ಮೇ 2023, 14:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಡಿಲೇಡ್‌ : ಭಾರತ ಮಹಿಳಾ ಹಾಕಿ ತಂಡದವರು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯನ್ನು 2–4 ಗೋಲುಗಳಿಂದ ಸೋತರು.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಐಸ್ಲಿಂಗ್‌ ಯುಟ್ರಿ (21ನೇ ನಿ.), ಮ್ಯಾಡಿ ಫಿಟ್ಜ್‌ಪ್ಯಾಟ್ರಿಕ್‌ (27), ಅಲೈಸ್‌ ಅರ್ನಾಟ್ (32) ಮತ್ತು ಕೋರ್ಟ್ನಿ ಶಾನೆಲ್ (35) ಅವರು ಆತಿಥೇಯ ತಂಡದ ಪರ ಗೋಲು ಗಳಿಸಿದರು. ಭಾರತ ತಂಡದ ಗೋಲುಗಳನ್ನು ಸಂಗೀತಾ ಕುಮಾರಿ (29) ಮತ್ತು ಶರ್ಮಿಳಾ ದೇವಿ (40) ತಂದಿತ್ತರು.

ಪಂದ್ಯದ ಮೊದಲ ಕ್ವಾರ್ಟರ್‌ ಗೋಲು ರಹಿತವಾಗಿತ್ತು. ಆಕ್ರಮಣಕಾರಿಯಾಗಿ ಆಡಿದ ಆಸ್ಟ್ರೇಲಿಯಾ ತಂಡ ಈ  ಅವಧಿಯಲ್ಲಿ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗಿಟ್ಟಿಸಿಕೊಂಡಿತು. ಆದರೆ ಭಾರತ ತಂಡದ ನಾಯಕಿ ಹಾಗೂ ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರು ಗೋಲು ತಡೆಯಲು ಯಶಸ್ವಿಯಾದರು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡ ತನಗೆ ಸಿಕ್ಕಿದ್ದ ಒಂದು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಹಾಳುಮಾಡಿಕೊಂಡಿತು.

ADVERTISEMENT

ಎರಡನೇ ಕ್ವಾರ್ಟರ್‌ನ ಆರನೇ ನಿಮಿಷದಲ್ಲಿ ಐಸ್ಲಿಂಗ್‌ ಅವರು ಗೋಲಿನ ಖಾತೆ ತೆರೆದರೆ, ಮ್ಯಾಡಿ ಅವರು ಕೆಲವೇ ನಿಮಿಷಗಳಲ್ಲಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ವಿರಾಮಕ್ಕೆ ಒಂದು ನಿಮಿಷ ಇದ್ದಾಗ ಸಂಗೀತಾ ಅವರು ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು.

ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಮತ್ತೆರಡು ಗೋಲು ಗಳಿಸಿದ ಆತಿಥೇಯ ತಂಡ ಗೆಲುವು ಖಚಿತಪಡಿಸಿಕೊಂಡಿತು. ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದೆ. ಭಾರತ ತಂಡ ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ದ ಎರಡು ಪಂದ್ಯಗಳನ್ನು ಆಡಲಿದೆ. ಏಷ್ಯನ್‌ ಗೇಮ್ಸ್‌ಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಸವಿತಾ ಪೂನಿಯಾ ಬಳಗ ತಂಡ ಈ ಪ್ರವಾಸ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.