ಅಡಿಲೇಡ್ : ಭಾರತ ಮಹಿಳಾ ತಂಡದವರು ಆಸ್ಟ್ರೇಲಿಯಾ ವಿರುದ್ಧದ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಪ್ರಬಲ ಹೋರಾಟ ನಡೆಸಿದರೂ, 2–3 ಗೋಲುಗಳಿಂದ ಸೋತರು.
ಶನಿವಾರ ನಡೆದ ಪಂದ್ಯದಲ್ಲಿ ಟಾಟಮ್ ಸ್ಟಿವರ್ಟ್ (12 ಮತ್ತು 45ನೇ ನಿ.) ಅವರು ಆತಿಥೇಯ ತಂಡಕ್ಕೆ ಎರಡು ಗೋಲುಗಳನ್ನು ತಂದಿತ್ತರೆ, ಮತ್ತೊಂದು ಗೋಲನ್ನು ಪಿಪಾ ಮಾರ್ಗನ್ (38ನೇ ನಿ.) ಗಳಿಸಿದರು. ಭಾರತದ ಪರ ಸಂಗೀತಾ ಕುಮಾರಿ (13) ಮತ್ತು ಗುರ್ಜಿತ್ ಕೌರ್ (17) ಅವರು ಚೆಂಡನ್ನು ಗುರಿ ಸೇರಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2–0 ರಲ್ಲಿ ಮುನ್ನಡೆ ಸಾಧಿಸಿದೆ. ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಭಾರತ ತಂಡ, ಮೊದಲ ಪಂದ್ಯವನ್ನು 2–4 ಗೋಲುಗಳಿಂದ ಸೋತಿತ್ತು.
ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಆ ಬಳಿಕ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಕೂಟಕ್ಕೆ ತಯಾರಿ ನಡೆಸುವ ನಿಟ್ಟಿನಲ್ಲಿ ಭಾರತ ಈ ಪ್ರವಾಸ ಕೈಗೊಂಡಿದೆ.
ಮೊದಲ ಪಂದ್ಯಕ್ಕೆ ಹೋಲಿಸಿದರೆ, ಭಾರತ ತಂಡ ಶನಿವಾರ ಚೇತರಿಕೆಯ ಪ್ರದರ್ಶನ ನೀಡಿತು. ಎಂಟನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ, ಗುರ್ಜಿತ್ ಅವರ ಫ್ಲಿಕ್‌ಅನ್ನು ಎದುರಾಳಿ ತಂಡದ ನಾಯಕಿ ಹಾಗೂ ಗೋಲ್‌ಕೀಪರ್ ಜಾಸ್ಲಿನ್ ಬಾರ್ಟಮ್ ತಡೆದರು.
12ನೇ ನಿಮಿಷದಲ್ಲಿ ಆತಿಥೇಯ ತಂಡವು ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಆದರೆ ತಿರುಗೇಟು ನೀಡಿದ ಭಾರತ ತಂಡ 13ನೇ ನಿಮಿಷದಲ್ಲಿ ಸಮಬಲ ಸಾಧಿಸಿತು. ಶರ್ಮಿಳಾ ದೇವಿ ನೀಡಿದ ಪಾಸ್‌ನಲ್ಲಿ ಸಂಗೀತಾ ಚೆಂಡನ್ನು ಗುರಿ ಸೇರಿಸಿದರು.
ಎರಡನೇ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಭಾರತ ಗೋಲು ಗಳಿಸಿ 2–1 ರಲ್ಲಿ ಮುನ್ನಡೆ ಸಾಧಿಸಿತು. ಗುರ್ಜಿತ್ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು.
ವಿರಾಮದ ವೇಳೆಗೆ 1–2 ರಲ್ಲಿ ಹಿನ್ನಡೆಯಲ್ಲಿದ್ದ ಆಸ್ಟ್ರೇಲಿಯಾ ತಂಡ ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಪುಟಿದೆದ್ದು ನಿಂತು ಗೆಲುವು ಒಲಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.