ADVERTISEMENT

ಮನ್‌ಪ್ರೀತ್‌ಗೆ ಮುಂದಾಳತ್ವ

ಅಜ್ಲಾನ್ ಶಾ ಕಪ್‌ ಹಾಕಿ ಟೂರ್ನಿಗೆ ಭಾರತ ತಂಡ; ಪ್ರಮುಖ ಆಟಗಾರರ ಗೈರು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:25 IST
Last Updated 6 ಮಾರ್ಚ್ 2019, 19:25 IST
ಮನ್‌ಪ್ರೀತ್‌ ಸಿಂಗ್‌
ಮನ್‌ಪ್ರೀತ್‌ ಸಿಂಗ್‌   

ನವದೆಹಲಿ (ಪಿಟಿಐ): ಪ್ರತಿಭಾನ್ವಿತ ಆಟಗಾರ ಮನ್‌ಪ್ರೀತ್‌ ಸಿಂಗ್‌, ಮುಂಬರುವ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಮಾರ್ಚ್‌ 23ರಿಂದ 30ರ ವರೆಗೆ ಮಲೇಷ್ಯಾದ ಇಫೊದಲ್ಲಿ ಟೂರ್ನಿ ನಡೆಯಲಿದೆ. ಹಾಕಿ ಇಂಡಿಯಾ (ಎಚ್‌ಐ) ಈ ಟೂರ್ನಿಗೆ ಬುಧವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಕರ್ನಾಟಕದ ಎಸ್‌.ವಿ.ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌, ಲಲಿತ್‌ ಉಪಾಧ್ಯಾಯ, ಡಿಫೆಂಡರ್‌ ರೂಪಿಂದರ್‌ ಪಾಲ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಮಿಡ್‌ ಫೀಲ್ಡರ್‌ ಚಿಂಗ್ಲೆನ್‌ಸನಾ ಸಿಂಗ್‌ ಅವರು ಗಾಯದ ಕಾರಣ ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಹೊಸಬರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಡಿಫೆಂಡರ್‌ ಸುರೇಂದರ್‌ ಕುಮಾರ್‌ ಅವರು ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ತಂಡದಲ್ಲಿದ್ದಾರೆ.

ಭಾರತ, ಮಲೇಷ್ಯಾ, ಕೆನಡಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮತ್ತು ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಜಪಾನ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಮಾರ್ಚ್‌ 23ರಂದು ಜಪಾನ್‌ ಎದುರು ಆಡುವ ಮೂಲಕ ಮನ್‌ಪ್ರೀತ್‌ ಬಳಗ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ತರಬೇತಿ ಪಡೆಯುತ್ತಿರುವ ಭಾರತ ತಂಡ ಮಾರ್ಚ್‌ 18 ರಂದು ಮಲೇಷ್ಯಾಕ್ಕೆ ಹೋಗಲಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತ್ತು. ಹೀಗಾಗಿ ಮುಖ್ಯ ಕೋಚ್‌ ಹುದ್ದೆಯಿಂದ ಹರೇಂದ್ರ ಸಿಂಗ್‌ ಅವರನ್ನು ವಜಾ ಮಾಡಲಾಗಿತ್ತು. ಅಜ್ಲಾನ್‌ ಶಾ ಕಪ್‌ನಲ್ಲಿ ತಂಡವು ಕೋಚ್‌ ಇಲ್ಲದೆಯೇ ಭಾಗವಹಿಸುತ್ತಿದೆ. ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್‌ ಡೈರೆಕ್ಟರ್‌ ಡೇವಿಡ್‌ ಜಾನ್‌ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಪಿ.ಆರ್‌.ಶ್ರೀಜೇಶ್‌ ಮತ್ತು ಕೃಷ್ಣ ಬಿ.ಪಾಠಕ್‌.

ಡಿಫೆಂಡರ್‌ಗಳು: ಗುರಿಂದರ್‌ ಸಿಂಗ್, ಸುರೇಂದರ್‌ ಕುಮಾರ್‌ (ಉಪ ನಾಯಕ), ವರುಣ್‌ ಕುಮಾರ್‌, ಬೀರೇಂದ್ರ ಲಾಕ್ರಾ, ಅಮಿತ್‌ ರೋಹಿದಾಸ್‌ ಮತ್ತು ಕೋಥಾಜಿತ್‌ ಸಿಂಗ್‌.

ಮಿಡ್‌ಫೀಲ್ಡರ್‌ಗಳು: ಹಾರ್ದಿಕ್‌ ಸಿಂಗ್‌, ನೀಲಕಂಠ ಶರ್ಮಾ, ಸುಮಿತ್‌, ವಿವೇಕ್‌ ಸಾಗರ್‌ ಪ್ರಸಾದ್‌ ಮತ್ತು ಮನ್‌ಪ್ರೀತ್‌ ಸಿಂಗ್‌ (ನಾಯಕ).

ಫಾರ್ವರ್ಡ್‌ಗಳು: ಮನದೀಪ್‌ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್‌, ಗುರ್ಜಂತ್‌ ಸಿಂಗ್‌, ಶಿಲಾನಂದ ಲಾಕ್ರಾ ಮತ್ತು ಸುಮಿತ್‌ ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.