ರೂರ್ಕೆಲಾ: ಮೂರು ಬಾರಿಯ ಚಾಂಪಿಯನ್ ನೆದರ್ಲೆಂಡ್ಸ್ ಮತ್ತು ಕಳೆದ ಬಾರಿಯ ಪ್ರಶಸ್ತಿ ವಿಜೇತ ಬೆಲ್ಜಿಯಂ ತಂಡಗಳು ಎಫ್‌ಐಎಚ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದವು.
ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್ 4–0 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿತು.
ಆಕ್ರಮಣಕಾರಿ ಆಟವಾಡಿದ ನೆದರ್ಲೆಂಡ್ಸ್ ತಂಡಕ್ಕೆ ಥೈಸ್ ವಾನ್ ಡ್ಯಾಮ್ ಅವರು 19ನೇ ನಿಮಿಷದಲ್ಲಿ ಫೀಲ್ಡ್ ಗೋಲು ಮೂಲಕ ಮುನ್ನಡೆ ತಂದಿತ್ತರು. ನಾಲ್ಕು ನಿಮಿಷಗಳ ಬಳಿಕ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಜಿಪ್ ಯಾನ್ಸೆನ್ ಗೋಲಾಗಿ ಪರಿವರ್ತಿಸಿದರು.
ಟ್ಯುನ್ ಬೈನ್ಸ್ (46ನೇ ನಿ.) ಮತ್ತು ಯೋರಿಟ್ ಕ್ರೂನ್ (59 ನೇ ನಿ.) ಅವರು ಕ್ರಮವಾಗಿ ಪೆನಾಲ್ಟಿ ಕಾರ್ನರ್ ಹಾಗೂ ಫೀಲ್ಡ್ ಗೋಲು ಮೂಲಕ ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಇನ್ನೊಂದು ಪಂದ್ಯದ್ಲಲಿ ಬೆಲ್ಜಿಯಂ 5–0 ಗೋಲುಗಳಿದ ಕೊರಿಯಾ ತಂಡವನ್ನು ಸೋಲಿಸಿತು. ಕೊರಿಯಾ ಮೊದಲ 30 ನಿಮಿಷ ಪ್ರಬಲ ಪೈಪೋಟಿ ನೀಡಿ ಎದುರಾಳಿ ತಂಡಕ್ಕೆ ಯಾವುದೇ ಗೋಲು ಬಿಟ್ಟುಕೊಡಲಿಲ್ಲ. ಆ ಬಳಿಕ ಬೆಲ್ಜಿಯಂ ಪೂರ್ಣ ಪ್ರಭುತ್ವ ಸಾಧಿಸಿತು.
ಅಲೆಕ್ಸಾಂಡರ್ ಹೆಂಡ್ರಿಕ್ಸ್ 30ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇತರ ಗೋಲುಗಳನ್ನು ಟಾಂಗುಯ್ ಕೊಸಿನ್ಸ್ (42), ಫ್ಲಾರೆಂಟ್ ವಾನ್ ಆಬೆಲ್ (49), ಸೆಬಾಸ್ಟಿಯನ್ ಡಾಕಿಯೆರ್ (51) ಮತ್ತು ಆರ್ಥರ್ ಡಿ ಸ್ಲೂವೆರ್ (57) ತಂದುಕೊಟ್ಟರು. ಇದರಲ್ಲಿ ಎರಡು ಗೋಲುಗಳು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಂದವು.
ನ್ಯೂಜಿಲೆಂಡ್‌ಗೆ ಗೆಲುವು: ದಿನದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 3–1 ಗೋಲುಗಳಿಂದ ಚಿಲಿ ವಿರುದ್ಧ ಗೆದ್ದಿತು. ಸ್ಯಾಮ್ ಲೇನ್ ಅವರು 9ನೇ ನಿಮಿಷದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮುನ್ನಡೆ ತಂದಿತ್ತರು.
ಸ್ಯಾಮ್ ಹೈಹ ಅವರು 11 ಮತ್ತು 18ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಚಿಲಿ ತಂಡದ ಏಕೈಕ ಗೋಲನ್ನು ಇಗ್ನೆಸಿಯೊ ಕೊಂಟಾರ್ಡೊ 49ನೇ ನಿ.ದಲ್ಲಿ ತಂದುಕೊಟ್ಟರು.
ನೆದರ್ಲೆಂಡ್ಸ್ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ ಮೂರು ಪಾಯಿಂಟ್ಸ್ ಹೊಂದಿವೆ. ಉತ್ತಮ ಗೋಲು ಸರಾಸರಿಯಲ್ಲಿ ನೆದರ್ಲೆಂಡ್ಸ್ ತಂಡ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ಅತಿದೊಡ್ಡ ಕ್ರೀಡಾಂಗಣ: ಎಫ್‌ಐಎಚ್
ರೂರ್ಕೆಲಾ (ಪಿಟಿಐ): ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಬಿರ್ಸಾ ಮುಂಡಾ ಕ್ರೀಡಾಂಗಣ, ಆಸನಗಳ ಸಾಮರ್ಥ್ಯದಲ್ಲಿ ವಿಶ್ವದಲ್ಲೇ ಅತಿದೊಡ್ಡ ಹಾಕಿ ಕ್ರೀಡಾಂಗಣ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಹೇಳಿದೆ.
‘ಈ ಕ್ರೀಡಾಂಗಣ ವಾಸ್ತುಶಿಲ್ಪದ ವಿಷಯದಲ್ಲಿ ಗಮನ ಸೆಳೆಯುವುದು ಮಾತ್ರವಲ್ಲದೆ, ಹಾಕಿ ಕ್ರೀಡೆಗೆ ಮಾತ್ರ ಮೀಸಲಾಗಿರುವ ಕ್ರೀಡಾಂಗಣಗಳಲ್ಲಿ ವಿಶ್ವದಲ್ಲೇ ಅತಿದೊಡ್ಡದು’ ಎಂದು ಎಫ್‌ಐಎಚ್ ತಿಳಿಸಿದೆ. ಬಿರ್ಸಾ ಮುಂಡಾ ಕ್ರೀಡಾಂಗಣ 21 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.