ಭುವನೇಶ್ವರ: ಪೆಲ್ಲಾಟ್ ಗೊಂಜಾಲೊ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಜರ್ಮನಿ ತಂಡವನ್ನು ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್ ತಲುಪಿಸಿದವು.
ಇಲ್ಲಿ ಶುಕ್ರವಾರ ನಡೆದ ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ 4–3ರಿಂದ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿತು.
ಗೊಂಜಾಲೊ 42, 51 ಮತ್ತು 58ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು. ಫೈನಲ್‌ನಲ್ಲಿ ಜರ್ಮನಿ– ಬೆಲ್ಜಿಯಂ ಮುಖಾಮುಖಿಯಾಗಲಿವೆ.
ಆಸ್ಟ್ರೇಲಿಯಾ ತಂಡಕ್ಕಾಗಿ ಹೇವರ್ಡ್ ಜೆರೆಮಿ 11ನೇ ನಿಮಿಷದಲ್ಲೇ (ಪೆನಾಲ್ಟಿ ಕಾರ್ನರ್) ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಇಪರ್ಮಸ್ ನೇಥನ್ 26ನೇ ನಿಮಿಷದಲ್ಲಿ ಗಳಿಸಿದ ಫೀಲ್ಡ್ ಗೋಲು ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿತ್ತು. ನಂತರದ ಆಟದಲ್ಲಿ ಜರ್ಮನಿ ಪ್ರಾಬಲ್ಯ ಸಾಧಿಸಿತ್ತು. ಆದರೆ 57ನೇ ನಿಮಿಷದಲ್ಲಿ ಗೋವರ್ಸ್ ಬ್ಲೇಕ್ ಗಳಿಸಿದ ಗೋಲು ಪಂದ್ಯವನ್ನು 3–3ರಿಂದ ಸಮಬಲಕ್ಕೆ ತಂದಿತ್ತು.
ಇದಾದ ಎರಡನೇ ನಿಮಿಷದಲ್ಲಿ ಫೀಲ್ಡ್ ಗೋಲು ಹೊಡೆದ ವೆಲ್ಲೆನ್ ನಿಕ್ಲಾಸ್ (59ನೇ ನಿಮಿಷ) ಜರ್ಮನಿ ತಂಡವು ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದರು.
ಎರಡು ಬಾರಿಯ ಚಾಂಪಿಯನ್ ಜರ್ಮನಿ ತಂಡವು 2010ರ ಬಳಿಕ ಮೊದಲ ಬಾರಿ ಫೈನಲ್ ತಲುಪಿದೆ. ನವದೆಹಲಿಯಲ್ಲಿ ನಡೆದ ಆ ಆವೃತ್ತಿಯಲ್ಲಿ ತಂಡ ರನ್ನರ್ಸ್ ಅಪ್ ಆಗಿತ್ತು. 2002, 2006ರಲ್ಲಿ ಚಾಂಪಿಯನ್ ಆಗಿದ್ದ ಜರ್ಮನಿ, 1982ರಲ್ಲಿ ಬೆಳ್ಳಿ ಪದಕ ಜಯಿಸಿತ್ತು.
ಪ್ರಶಸ್ತಿ ಸುತ್ತಿಗೆ ಬೆಲ್ಜಿಯಂ: ಇನ್ನೊಂದು ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 3–2ರಿಂದ ನೆದರ್ಲೆಂಡ್ಸ್ ತಂಡವನ್ನು ಪರಾಭವಗೊಳಿಸಿ ಫೈನಲ್ ತಲುಪಿತು.
ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು. ಬೆಲ್ಜಿಯಂ ಪರ ಬೂನ್ ಟಾಮ್ (26ನೇ ನಿ. ಪೆನಾಲ್ಟಿ ಕಾರ್ನರ್) ಮತ್ತು ಡಿ ಕೆರ್ಪೆಲ್ ನಿಕೊಲಾಸ್ (44ನೇ ನಿ.) ಗೋಲು ದಾಖಲಿಸಿದರೆ, ನೆದರ್ಲೆಂಡ್ಸ್ ತಂಡದ ಎರಡೂ ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜಾನ್‌ಸೆನ್ ಜಿಪ್ (11ನೇ ಮತ್ತು 35ನೇ ನಿ.) ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.