ಭುವನೇಶ್ವರ: ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ 'ಡಿ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ವೇಲ್ಸ್ ವಿರುದ್ಧ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದೆ.
ಭಾರತ ತಂಡವೀಗ ಭಾನುವಾರ ನಡೆಯಲಿರುವ ಕ್ರಾಸೋವರ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.
ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಭಾರತೀಯ ಆಟಗಾರರು ಚುರುಕಿನ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು.
ಭಾರತದ ಪರ ಶಂಶೀರ್ ಸಿಂಗ್ (22ನೇ ನಿಮಿಷ), ಆಕಾಶ್‌ದೀಪ್ ಸಿಂಗ್ (33ನೇಮತ್ತು 46ನೇ ನಿಮಿಷ) ಮತ್ತು ಹರ್ಮನ್‌ಪ್ರೀತ್ ಸಿಂಗ್ (60ನೇ ನಿಮಿಷ) ವಿಜಯದ ಗೋಲುಗಳನ್ನು ಬಾರಿಸಿದರು.
ಮೊದಲಾರ್ಧದಲ್ಲಿ ಭಾರತ 1-0 ಗೋಲಿನ ಅಂತರದ ಮುನ್ನಡೆ ಕಾಯ್ದುಕೊಂಡಿತು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಿದ ವೇಲ್ಸ್ 2-2ರ ಸಮಬಲ ಸಾಧಿಸಿತು. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಅಮೋಘ ಆಟವಾಡುವ ಮೂಲಕ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಎರಡನೇ ಸ್ಥಾನದಲ್ಲಿ ಭಾರತ...
ಈ ಗೆಲುವಿನ ಹೊರತಾಗಿಯೂ ಭಾರತ ತಂಡವು ಡಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಗೋಲುಗಳ ಅಂತರದಲ್ಲಿ ಇಂಗ್ಲೆಂಡ್ ಭಾರತಕ್ಕಿಂತಲೂ ಮುನ್ನಡೆ ಕಾಯ್ದುಕೊಂಡಿದೆ.
ಈ ಮುನ್ನ ಸ್ಪೇನ್ ವಿರುದ್ಧ ಗೆಲುವು ದಾಖಲಿಸಿದ್ದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಡ್ರಾ ಫಲಿತಾಂಶ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.