ಹಾಂಗ್‌ಕಾಂಗ್: ಶ್ರೇಯಾಂಕರಹಿತ ಆಟಗಾರ ಕಿಡಂಬಿ ಶ್ರೀಕಾಂತ್ ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದರು. ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಚೆನ್ ಲಾಂಗ್ ಪಂದ್ಯದ ಅರ್ಧದಲ್ಲೇ ಹಿಂದೆಸರಿದ ಕಾರಣ ಶ್ರೀಕಾಂತ್ ಹಾದಿ ಸುಗಮವಾಯಿತು.
ಭಾರತದ ಆಟಗಾರ ಮೊದಲ ಗೇಮನ್ನು 21–13ರಲ್ಲಿ ಗೆದ್ದು ಎರಡನೇ ಗೇಮ್ ಆರಂಭಿಸಿದ್ದರು. ಐದನೇ ಶ್ರೇಯಾಂಕ ಪಡೆದಿದ್ದ ಲಾಂಗ್ ಈ ಸಂದರ್ಭದಲ್ಲಿ ಪಂದ್ಯ ಬಿಟ್ಟುಕೊಡಲು ನಿರ್ಧರಿಸಿದರು. ಚೀನಾದ ಲಾಂಗ್ ವಿರುದ್ಧ ಆಡಿರುವ ಎಂಟು ಪಂದ್ಯಗಳಲ್ಲಿ ಶ್ರೀಕಾಂತ್‌ಗೆ ಇದು ಎರಡನೇ ಗೆಲುವು.
ಕಳೆದ ಏಪ್ರಿಲ್‌ನಲ್ಲಿ ಮಲೇಷಿಯಾ ಓಪನ್ ಕ್ವಾರ್ಟರ್‌ಫೈನಲ್‌ನಲ್ಲಿ ಇವರಿಬ್ಬರು ಮುಖಾಮುಖಿ ಆದಾಗ ಲಾಂಗ್ ನೇರ ಗೇಮ್‌ಗಳಲ್ಲಿ ಜಯಗಳಿಸಿದ್ದರು. ಶ್ರೀಕಾಂತ್ ಈ ಹಿಂದೆ, 2017ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಲಾಂಗ್ ಅವರನ್ನು ಸೋಲಿಸಿದ್ದರು.
ಟೂರ್ನಿಯಲ್ಲಿ ಭಾರತದ ಸವಾಲನ್ನು ಜೀವಂತವಾಗಿ ಉಳಿಸಿರುವ ಶ್ರೀಕಾಂತ್ ಸೆಮಿಫೈನಲ್‌ನಲ್ಲಿ, ಹಾಂಗ್‌ಕಾಂಗ್‌ನ ಲೀ ಚೆಕ್ ಯಿಯು ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಲಿ ಚೆಕ್ ಯಿಯು ಏಳನೇ ಶ್ರೇಯಾಂಕದ ವಿಕ್ಟರ್ ಆಕ್ಸೆಲ್‌ಸನ್ ಎದುರು 21–14, 21–19ರಿಂದ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.