ಹಾಂಗ್‌ಕಾಂಗ್: ಪ್ರಬಲ ಹೋರಾಟದ ನೀಡಿದರೂ ಭಾರತದ ಕಿದಂಬಿ ಶ್ರೀಕಾಂತ್, ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುಗ್ಗರಿಸಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಸ್ಥಳೀಯ ಫೆವರೀಟ್ ಲೀ ಚೆಕ್ ಯಿಯು ಎದುರು 9–21, 23–25ರಿಂದ ಸೋತರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲೂ ಅಂತ್ಯವಾಯಿತು.
42 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದ ಎರಡನೇ ಗೇಮ್‌ನಲ್ಲಿ ಶ್ರೀಕಾಂತ್, ಆರು ಗೇಮ್ ಪಾಯಿಂಟ್ ಗಳಿಸಿದರೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ.
ಇಂಡಿಯನ್ ಓಪನ್ ಟೂರ್ನಿಯಲ್ಲಿ ರನ್ನರ್‌ಅಪ್ ಆಗಿದ್ದ ಭಾರತದ ಶಟ್ಲರ್, ಆ ಬಳಿಕ ನಾಲ್ಕರ ಘಟ್ಟದವರೆಗೆ ತಲುಪಿದ್ದು ಇಲ್ಲಿಯೇ.
ಮೊದಲ ಗೇಮ್ ಆರಂಭದಲ್ಲಿ 6–1ರ ಮುನ್ನಡೆ ಗಳಿಸಿದ್ದ ಲೀ, ಅದನ್ನೇ ಕಾಯ್ದುಕೊಂಡು ಮುನ್ನುಗ್ಗಿದರು. ಅವರನ್ನು ಬೆನ್ನಟ್ಟಲು ಶ್ರೀಕಾಂತ್‌ಗೆ ಸಾಧ್ಯವಾಗಲಿಲ್ಲ. ಎರಡನೇ ಗೇಮ್‌ನ ಶುರುವಿನಲ್ಲಿ ಭಾರತದ ಆಟಗಾರ 5–1 ಮುನ್ನಡೆಯಲ್ಲಿದ್ದರು. ಆದರೆ ಈ ಅಂತರವನ್ನು ಲೀ, ಬೇಗ ಸಮ ಮಾಡಿಕೊಂಡರು. ಬಳಿಕ ಇಬ್ಬರ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯಿತು. ಅಂತಿಮವಾಗಿ ಶ್ರೀಕಾಂತ್ ಪಂದ್ಯ ಕೈಚೆಲ್ಲಿದರು.
23 ವರ್ಷದ ಲೀ, ಹೋದ ವರ್ಷ ಇಂಡಿಯಾ ಓಪನ್ ಟೂರ್ನಿಯಲ್ಲಿ ಶ್ರೀಕಾಂತ್ ಅವರಿಗೆ ಶರಣಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.