ADVERTISEMENT

ಹಾಂಗ್‌ಕಾಂಗ್ ಓಪನ್: ಸ್ಪರ್ಧೆಯಿಂದ ಹಿಂದೆ ಸರಿದ ಚೀನಾ ಆಟಗಾರ, ಸೆಮಿಗೆ ಶ್ರೀಕಾಂತ್‌

ಏಜೆನ್ಸೀಸ್
Published 15 ನವೆಂಬರ್ 2019, 14:11 IST
Last Updated 15 ನವೆಂಬರ್ 2019, 14:11 IST
   

ಹಾಂಗ್‌ಕಾಂಗ್‌: ಚೀನಾ ಆಟಗಾರ ಚೆನ್‌ ಲಾಂಗ್‌ ಅವರು ಗಾಯದ ಸಮಸ್ಯೆಯಿಂದಾಗಿ ಅರ್ಧದಲ್ಲೇ ಪಂದ್ಯ ತೊರೆದ ಕಾರಣಭಾರತದ ಬ್ಯಾಡ್ಮಿಂಟನ್‌ ಆಟಗಾರ ಕಿಡಂಬಿ ಶ್ರೀಕಾಂತ್‌, ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸುಲಭವಾಗಿ ಸೆಮಿಫೈನಲ್‌ ತಲುಪಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 13ನೇ ಸ್ಥಾನ ಹೊಂದಿರುವ ಶ್ರೀಕಾಂತ್‌, ಮೊದಲ ಗೇಮ್‌ ಅನ್ನು23–13 ರಿಂದ ಗೆದ್ದಿದ್ದರು.ಎರಡನೇ ಗೇಮ್‌ನಲ್ಲೂ ಪ್ರಾಬಲ್ಯ ಮೆರೆದಿದ್ದ ಅವರು 1–0 ಮುನ್ನಡೆ ಸಾಧಿಸಿದ್ದರು. ಅದಾದ ಕೆಲ ಹೊತ್ತಿನಲ್ಲಿ ಎದುರಾಳಿ ಆಟಗಾರ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಮನವಿ ಮಾಡಿದರು.

ಇದರೊಂದಿಗೆ ಚೀನಾ ಆಟಗಾರನೆದುರು ಶ್ರೀಕಾಂತ್‌ ಎರಡನೇ ಗೆಲುವು ದಾಖಲಿಸಿದಂತಾಯಿತು. ಈ ಹಿಂದೆ ಶ್ರೀಕಾಂತ್‌ 2017ರಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ ಪಂದ್ಯದಲ್ಲಿ 22–20, 21–16 ನೇರ ಅಂತರದಲ್ಲಿ ಚೆನ್‌ ಅವರನ್ನು ಸೋಲಿಸಿದ್ದರು.

ADVERTISEMENT

ಈ ಇಬ್ಬರು ಇದುವರೆಗೆ ಎಂಟು ಬಾರಿ ಮುಖಾಮುಖಿ ಯಾಗಿದ್ದಾರೆ. ಚೆನ್‌ ಆರು ಸಲ ಗೆಲುವಿನ ನಗೆ ಬೀರಿದ್ದಾರೆ.

ಮತ್ತೊಂದು ಕ್ವಾರ್ಟರ್‌ಪೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಲೀ ಚೆವುಕ್‌ ಯೂ, ಡೆನ್ಮಾರ್ಕ್‌ನ ವಿಕ್ಟರ್‌ ಎಕ್ಸೆಲ್ಸನ್‌ಆಡಲಿದ್ದಾರೆ. ಆ ಪಂದ್ಯದ ವಿಜೇತರೊಂದಿಗೆ ಶ್ರೀಕಾಂತ್‌ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.