ಕೊವ್ಲೂನ್, ಹಾಂಕಾಂಗ್: ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ವಿಶ್ವ ಟೂರ್ ಬ್ಯಾಡ್ಮಿಂಟನ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಶ್ರೀಕಾಂತ್‌ಗೆ ಭಾರತದವರೇ ಆದ ಎಚ್.ಎಸ್.ಪ್ರಣಯ್ ಪ್ರಬಲ ಪೈಪೋಟಿ ನೀಡಿದರು. ಒಂದು ತಾಸು ಏಳು ನಿಮಿಷ ನಡೆದ ಪಂದ್ಯದಲ್ಲಿ ಶ್ರೀಕಾಂತ್ 18–21, 30–29, 21–18ರಿಂದ ಗೆದ್ದರು.
ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಶ್ರೀಕಾಂತ್ ಮತ್ತು ಪ್ರಣಯ್ ನಡುವಿನ ಹೋರಾಟ ಕುತೂಹಲ ಕೆರಳಿಸಿತ್ತು. ಪ್ರಣಯ್ ಆರಂಭದಲ್ಲಿ ಆಧಿಪತ್ಯ ಸಾಧಿಸಿದರೂ ನಂತರ ಶ್ರೀಕಾಂತ್ ಮೇಲುಗೈ ಸಾಧಿಸಿದರು. ಕಳೆದ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಪ್ರಣಯ್‌ಗೆ ಮಣಿಸಿದ್ದ ಶ್ರೀಕಾಂತ್ ಇಲ್ಲಿ ಸೇಡು ತೀರಿಸಿಕೊಂಡರು.
ಮೊದಲ ಗೇಮ್‌ನಲ್ಲಿ 9–9ರಿಂದ ಸಮಬಲ ಸಾಧಿಸಿದ್ದ ಶ್ರೀಕಾಂತ್ ನಂತರ ಎಡವಿದರು. ಹೀಗಾಗಿ ಪ್ರಣಯ್ 14–10ರಿಂದ ಮುನ್ನಡೆದರು. ನಂತರ ಗೇಮ್ 15–15ರ ಸಮಬಲಕ್ಕೆ ಸಾಕ್ಷಿಯಾಯಿತು. ಒತ್ತಡ ಮೆಟ್ಟಿನಿಂತು ಆಡಿದ ಪ್ರಣಯ್ ಗೇಮ್ ಗೆದ್ದು ಸಂಭ್ರಮಿಸಿದರು.
ಜಿದ್ದಾಜಿದ್ದಿಯ ಹಣಾಹಣಿ: ಎರಡನೇ ಗೇಮ್‌ನಲ್ಲಿ ಇಬ್ಬರೂ ಕೆಚ್ಚೆದೆಯಿಂದ ಹೋರಾಡಿದ ಕಾರಣ ಪ್ರೇಕ್ಷಕರು ರೋಮಾಂಚನಗೊಂಡರು. ವಿರಾಮದ ವೇಳೆ ಶ್ರೀಕಾಂತ್ 11–10ರಿಂದ ಮುನ್ನಡೆದರು. ನಂತರ ತಿರುಗೇಟು ನೀಡಿದ ಪ್ರಣಯ್ 15–12ರ ಮುನ್ನಡೆ ಸಾಧಿಸಿದರು. ಛಲ ಬಿಡದ ಶ್ರೀಕಾಂತ್ 16–16ರ ಸಮಬಲ ಸಾಧಿಸಿ, 19–17ರಿಂದ ಮುನ್ನಡೆದರು. ಪ್ರಣಯ್ ಕೂಡ ಪಟ್ಟು ಬಿಡಲಿಲ್ಲ. ಅಮೋಘ ಆಟವಾಡಿದ ಅವರು 19–19ರ ಸಮಬಲ ಸಾಧಿಸಿದರು.
ಈ ಹಂತದಿಂದ ಪಂದ್ಯ ಮತ್ತುಷ್ಟು ರೋಚಕವಾಯಿತು. ಇಬ್ಬರೂ ಸಮಬಲದಿಂದ ಹೋರಾಡಿದರು. ಅಂತಿಮವಾಗಿ ಶ್ರೀಕಾಂತ್ ಅವರು ಗೇಮ್ ತಮ್ಮದಾಗಿಸಿಕೊಂಡರು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಪ್ರಣಯ್ ನಿರಾಸೆಗೆ ಒಳಗಾದರು. ವಿರಾಮದ ವೇಳೆ 11–4ರಿಂದ ಮುನ್ನಡೆದ ಶ್ರೀಕಾಂತ್‌ಗೆ ನಂತರ ಸ್ವಲ್ಪ ಪ್ರತಿರೋಧ ಎದುರಾಯಿತು. ಪ್ರಣಯ್ 116–16ರ ಸಮಬಲ ಸಾಧಿಸಿದರೂ ನಂತರ ಗೇಮ್ ಸೋತು ಪಂದ್ಯವನ್ನು ಕೈಚೆಲ್ಲಿದರು.
ಎದುರಾಳಿ ನಿವೃತ್ತಿ; ಸಮೀರ್‌ಗೆ ಲಾಭ:ಒಲಿಂಪಿಕ್ ಚಾಂಪಿಯನ್ ಲಿನ್ ಡ್ಯಾನ್ ಎದುರಿನ ಪಂದ್ಯದಲ್ಲಿ ಅದೃಷ್ಟ, ಸಮೀರ್ ವರ್ಮಾ ಅವರ ಕೈ ಹಿಡಿಯಿತು. ಗಾಯದಿಂದ ಡ್ಯಾನ್ ಕಣಕ್ಕೆ ಇಳಿಯದ ಕಾರಣ ಸಮೀರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.
ಭಾರತದ ಮಿಶ್ರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಜ್ ರಣಕಿ ರೆಡ್ಡಿ ಚೀನಾ ತೈಪೆಯ ಲೀ ಯಾಂಗ್ ಮತ್ತು ಸೂ ಯಾ ಚಿಂಗ್ ಎದುರು ಸೋತು ಟೂರ್ನಿಯಿಂದ ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.