ADVERTISEMENT

ಸೈಕ್ಲಿಸ್ಟ್ ಅಲ್ಲದಿದ್ದರೂ 'ಸೈಕ್ಲಿಂಗ್' ಬೆಳೆಸಿದ‌ ಹೋಟೆಲ್ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 7:04 IST
Last Updated 1 ಮಾರ್ಚ್ 2021, 7:04 IST
ಗದಗದಲ್ಲಿ ಇತ್ತೀಚೆಗೆ ನಡೆದ ಗುಡ್ಡಗಾಡು ಸೈಕ್ಲಿಂಗ್‌ ಸ್ಪರ್ಧೆ
ಗದಗದಲ್ಲಿ ಇತ್ತೀಚೆಗೆ ನಡೆದ ಗುಡ್ಡಗಾಡು ಸೈಕ್ಲಿಂಗ್‌ ಸ್ಪರ್ಧೆ   

ಹುಬ್ಬಳ್ಳಿ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಯಾವ ಊರಿನಲ್ಲಿಯೇ ಆಗಲಿ; ಅಲ್ಲಿ ಸೈಕ್ಲಿಂಗ್‌ಗೆ ಸಂಬಂಧಿಸಿದ ಚಟುವಟಿಕೆಗಳು‌ ನಡೆದರೆ ಅಲ್ಲಿ ಶ್ರೀಧರ ಗೋರೆ ಹಾಜರಿರುತ್ತಿದ್ದರು. ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ಶ್ರೀಧರ ಮಾರುತಿರಾವ್ ಗೋರೆ (66) ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ವಿಜಯಪುರದಲ್ಲಿ ನಿಧನರಾದರು.

ಮೂಲತಃ ಹೋಟೆಲ್ ಉದ್ಯಮಿಯಾಗಿದ್ದ ಗೋರೆ ವಿಜಯಪುರದವರು. ಅವರು ಸೈಕ್ಲಿಸ್ಟ್ ಅಲ್ಲದಿದ್ದರೂ ಹಲವಾರು ಸೈಕ್ಲಿಸ್ಟ್‌ಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಎಸ್ಸೆಸ್ಸೆಲ್ಸಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೋಟೆಲ್ ಉದ್ಯಮ ಆರಂಭಿಸಿದರು. ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಚಂದ್ರಪ್ಪ ಕುರಣಿ ಅವರಿಂದ ಈ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಕಳೆದ ನಾಲ್ಕು ದಶಕಗಳಿಂದ ಸೈಕ್ಲಿಂಗ್ ಬೆಳವಣಿಗೆಗೆ ದುಡಿದಿದ್ದಾರೆ.

ಶ್ರೀಧರ ಮಾರುತಿರಾವ್ ಗೋರೆ

ಅವರ ಜೊತೆಗಿನ ನೆನಪುಗಳನ್ನು ಪ್ರಜಾವಾಣಿ ಜೊತೆ ಹಂಚಿಕೊಂಡ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ಗೋರೆ ಅವರಿಗೆ ಸೈಕ್ಲಿಂಗ್ ಬಗ್ಗೆ ಅಪಾರ ಪ್ರೀತಿ, ಗೌರವವಿತ್ತು. ಈ ಕಾರಣಕ್ಕಾಗಿ ಎಲ್ಲಿಯೇ ಟೂರ್ನಿಗಳು ನಡೆದರೂ ಅವರು ಹೋಗುತ್ತಿದ್ದರು. ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಅವರಷ್ಟು ದುಡಿದವರು ಇನ್ನೊಬ್ಬರಿಲ್ಲ ಎಂದು ಭಾವುಕರಾದರು.

ADVERTISEMENT

ಗೋರೆ ಅವರು ತಮ್ಮ ಸಹೋದರರಿಗೆ ಸೈಕ್ಲಿಂಗ್‌ ಕಲಿಯಲು ಪ್ರೋತ್ಸಾಹಿಸಿದರು. ಅವರ ಶ್ರಮದ ಫಲದಿಂದಲೇ ಕರ್ನಾಟಕದ ಸೈಕ್ಲಿಸ್ಟ್‌ಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.