ಪ್ಯಾರಿಸ್: ಭಾರತದ ಎಚ್.ಎಸ್.ಪ್ರಣಯ್ ಮತ್ತು ಸಮೀರ್ ವರ್ಮಾ ಅವರು ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತರು. ಇದರೊಂದಿಗೆ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.
ಗುರುವಾರ ನಡೆದ ಪಂದ್ಯದಲ್ಲಿ ಪ್ರಣಯ್ 19–21, 22–20, 19–21 ರಲ್ಲಿ ಚೀನಾದ ಲು ಗುವಾಂಗ್ ಜು ಕೈಯಲ್ಲಿ ಪರಾಭವಗೊಂಡರು. ಈ ರೋಚಕ ಕಾದಾಟ 1 ಗಂಟೆ 28 ನಿಮಿಷ ನಡೆಯಿತು.
ಮೊದಲ ಗೇಮ್ ಸೋತ ಭಾರತದ ಆಟಗಾರ, ಎರಡನೇ ಗೇಮ್‌ಅನ್ನು ಪ್ರಯಾಸದಿಂದ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಕೊನೆಯವರೆಗೂ ಜಿದ್ದಾಜಿದ್ದಿನ ಪೈಪೋಟಿ ನೀಡಿ ಸೋಲೊಪ್ಪಿಕೊಂಡರು.
ಸಮೀರ್ ವರ್ಮಾ 18–21, 11–21 ರಲ್ಲಿ ಥಾಯ್ಲೆಂಡ್‌ನ ಕನ್ಲಾವತ್ ವಿತಿಸರನ್ ಎದುರು ಸೋತರು. ಎದುರಾಳಿಯ ಶಿಸ್ತಿನ ಆಟಕ್ಕೆ ತಕ್ಕ ಪೈಪೋಟಿ ನೀಡಲು ಭಾರತದ ಆಟಗಾರ ವಿಫಲರಾದರು.
ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಭಾರತದ ಇನ್ನೊಬ್ಬ ಆಟಗಾರ ಕಿದಂಬ ಶ್ರೀಕಾಂತ್ ಅವರು ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಎದುರು ಸೋತು ಹೊರಬಿದ್ದಿದ್ದರು.
ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಜಪಾನ್‌ನ ತಕುರೊ ಹೊಹಿ– ಯೂಗೊ ಕೊಬಯಶಿ ವಿರುದ್ಧ ಪೈಪೋಟಿ ನಡೆಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.