ಹಾಂಗ್‌ಝೌ: ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್, ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರಣಯ್ ಮುಗ್ಗರಿಸಿದರು. ವಿಶ್ವ ನಂ.7 ರ‍್ಯಾಂಕ್‌ನ ಪ್ರಣಯ್ ಅವರು ಚೀನಾದ ಲೀ ಶೀ ಫೆಂಗ್ ವಿರುದ್ಧ 16-21, 9-21ರ ಅಂತರದಲ್ಲಿ ಸೋಲು ಕಂಡರು.
ಇದಕ್ಕೂ ಮೊದಲು ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಬೆನ್ನು ನೋವನ್ನು ಲೆಕ್ಕಿಸದೇ ದಿಟ್ಟ ಪ್ರದರ್ಶನ ತೋರಿದ್ದ ಪ್ರಣಯ್ ಗೆಲುವು ದಾಖಲಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಅಲ್ಲದೆ ತಮ್ಮದೇ ತಪ್ಪಿನಿಂದಾಗಿ ಹಿನ್ನಡೆ ಅನುಭವಿಸಿದರು.
ಏಷ್ಯನ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಪದಕ ಒಲಿದಿದೆ. 1982ರ ಏಷ್ಯನ್ ಗೇಮ್ಸ್‌ನಲ್ಲಿ ಸೈಯದ್ ಮೋದಿ ಕಂಚಿನ ಪದಕ ಗೆದ್ದಿದ್ದರು.
31 ವರ್ಷದ ಪ್ರಣಯ್, ಇದೇ ಕೂಟದಲ್ಲಿ ಪುರುಷರ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.