ADVERTISEMENT

ಮಂಜೀತ್‌ ಸಿಂಗ್‌ ಗೆದ್ದಾಗ ಸಂತಸವಾಯಿತು: ಜಿನ್ಸನ್‌

ಪಿಟಿಐ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST

ನವದೆಹಲಿ: ‘ನನ್ನ ನೆಚ್ಚಿನ ಕ್ರೀಡೆಯಾದ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲುವ ಇಚ್ಛೆ ಇತ್ತು. ಆದರೆ ಬೆಳ್ಳಿ ಗೆದ್ದಾಗ ಬೇಸರವಾಗಲಿಲ್ಲ. ಯಾಕೆಂದರೆ ಚಿನ್ನದ ಪದಕ ಭಾರತದವರೇ ಆದ ಮಂಜೀತ್ ಸಿಂಗ್‌ಗೆ ಲಭಿಸಿತ್ತು. ಎರಡೂ ಪಕದಗಳು ನಮ್ಮ ದೇಶಕ್ಕೇ ಬಂದಾಗ ಖುಷಿಯಾಯಿತು...’ ಏಷ್ಯನ್ ಕ್ರೀಡಾಕೂಟದ 1500 ಮೀಟರ್ಸ್ ಓಟದಲ್ಲಿ ಚಿನ್ನ ಮತ್ತು 800 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದ ಜಿನ್ಸನ್ ಜಾನ್ಸನ್‌ ಅವರ ಮನದಾಳ ಇದು.

ಭಾನುವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ‘800 ಮೀಟರ್ಸ್ ಓಟದ ಕೊನೆಯಲ್ಲಿ ನನಗೂ ಮಂಜೀತ್‌ಗೂ ನಡುವೆ ಹೆಚ್ಚು ಅಂತರ ಇರಲಿಲ್ಲ. ಕೂದಲೆಳೆ ಅಂತರದಲ್ಲಿ ನಾನು ಚಿನ್ನದ ಪದಕ ಕಳೆದುಕೊಂಡೆ’ ಎಂದರು.

‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕೆಲವು ವರ್ಷಗಳಿಂದ ಮಂಜೀತ್ ನನ್ನ ಪ್ರಮುಖ ಪ್ರತಿಸ್ಪರ್ಧಿ. ಆದ್ದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ನನಗೆ ಯಾವುದಾದರೂ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಾದರೆ ಮಂಜೀತ್‌ಗೂ ಅದು ಸಾಧ್ಯ ಎಂದು ಗೊತ್ತಿತ್ತು.

ADVERTISEMENT

800 ಮೀಟರ್ಸ್ ಓಟದ ಕೊನೆಯ ಹಂತದಲ್ಲಿ ಮಂಜೀತ್‌ ನಾಲ್ವರಿಗಿಂತ ಹಿಂದೆ ಇದ್ದರು. ಆದರೆ ಅಂತಿಮ 25 ಮೀಟರ್ಸ್ ಉಳಿದಿದ್ದಾಗ ಅವರು ಮುನ್ನುಗ್ಗಿದರು. ನಂತರ ಎಲ್ಲರನ್ನೂ ಹಿಂದಿಕ್ಕಿ ಮೊದಲಿಗರಾದರು. ಅವರು 1 ನಿಮಿಷ 46.15 ಸೆಕೆಂಡಿನಲ್ಲಿ ಗುರಿ ಮುಟ್ಟಿದರೆ ಜಿನ್ಸನ್‌ 1 ನಿಮಿಷ 46.35 ಸೆಕೆಂಡಿನಲ್ಲಿ ಓಟ ಮುಗಿಸಿದ್ದರು.

‘ಕೊನೆಯ ಹಂತದಲ್ಲಿ ಭಾರಿ ಸ್ಪರ್ಧೆ ಇತ್ತು. ಈ ಸಂದರ್ಭದಲ್ಲಿ ಮಂಜೀತ್‌ ಮಿಂಚಿನ ಓಟದ ಮೂಲಕ ಎಲ್ಲರನ್ನೂ ದಂಗುಬಡಿಸಿದರು. ನನಗೆ ಅದು ಸಾಧ್ಯವಾಗಲಿಲ್ಲ. 800 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲಲಾಗಲಿಲ್ಲ ಎಂಬ ಬೇಸರ 1500 ಮೀಟರ್ಸ ಓಟದ ಸಂದರ್ಭದಲ್ಲಿ ಕಾಡಲಿಲ್ಲ. ಆ ಸ್ಪರ್ಧೆಯಲ್ಲಿ ಪೂರ್ಣ ಸಾಮರ್ಥ್ಯವನ್ನು ಹೊರಗೆಡವಿ ಗೆದ್ದೆ’ ಎಂದು ಜಿನ್ಸನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.