ADVERTISEMENT

ಮಗಳ ನೆನಪು ಕಾಡುತ್ತಿದೆ, ಪದಕ ಗೆಲ್ಲುವ ತವಕವೂ ಹೆಚ್ಚಿದೆ: ಆರ್ಚರಿ ಪಟು ದೀಪಿಕಾ

ಪಿಟಿಐ
Published 20 ಜುಲೈ 2024, 14:34 IST
Last Updated 20 ಜುಲೈ 2024, 14:34 IST
<div class="paragraphs"><p>ದೀಪಿಕಾ ಕುಮಾರಿ</p></div>

ದೀಪಿಕಾ ಕುಮಾರಿ

   

ಪಿಟಿಐ ಚಿತ್ರ

ಜಾಕ್ಸ್‌ (ಫ್ರಾನ್ಸ್): ಆರ್ಚರಿ ಪಟು ದೀಪಿಕಾ ಕುಮಾರಿ ಅವರು ತಮ್ಮ ಬದುಕಿನ ಅತಿಮುಖ್ಯವಾದ ಎರಡು ಸಂಗತಿಗಳ ತೊಳಲಾಟದಲ್ಲಿದ್ದಾರೆ. ತಮ್ಮ 19 ತಿಂಗಳ ಮಗಳನ್ನು ಬಿಟ್ಟು ದೂರದ ಪ್ಯಾರಿಸ್‌ನ ಕ್ರೀಡಾಗ್ರಾಮದಲ್ಲಿರಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಲೇಬೇಕೆಂಬ ತವಕದಲ್ಲಿ ತಾನಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

ಒಲಿಂಪಿಕ್ಸ್‌ನ ಅವರ ನಾಲ್ಕನೇ ಪ್ರಯತ್ನ ಇದಾಗಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲೇಬೇಕೆಂಬ ಛಲ ಹೊತ್ತ ದೀಪಿಕಾ, ಅಭ್ಯಾಸಕ್ಕಾಗಿ ಕಳೆದ ಎರಡು ತಿಂಗಳಿಂದ ಮಗಳಿಂದ ದೂರವಿದ್ಧಾರೆ. ತಮ್ಮ ಎಳೆಯ ಕಂದನ ನೆನಪಾದರೂ, ದೇಶಕ್ಕಾಗಿ ಪದಕ ಗೆಲ್ಲುವ ಅವರ ದೃಢ ನಿರ್ಧಾರದಿಂದ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

‘ಮಗಳನ್ನು ಬಿಟ್ಟಿರುವ ನೋವನ್ನು ವಿವರಿಸುವುದು ತೀರಾ ಕಷ್ಟ. ಆದರೆ ಆಕೆ ನನ್ನ ಅತ್ತೆ, ಮಾವನೊಂದಿಗೆ ಹೊಂದಿಕೊಂಡು ನನಗೆ ಸಹಕರಿಸಿದ್ದಾಳೆ. ಆದರೆ ಕಳೆದ ಹಲವು ವರ್ಷಗಳಿಂದ ನಾವು ಯಾವುದಕ್ಕಾಗಿ ಇಷ್ಟೆಲ್ಲಾ ಕಷ್ಟ ಪಡುತ್ತಿದ್ದೇವೋ ಅದನ್ನು ಸಾಧಿಸುವ ಸಮಯ ಬಂದಿದೆ’ ಎಂದು ದೀಪಿಕಾ ಹೇಳಿದ್ದಾರೆ. 

ದೀಪಿಕಾ ಅವರು ಪ್ಯಾರಿಸ್‌ಗೆ ಹೊರಡುವ ಮೊದಲು ಅವರ ಪತಿಯಾದ ಆರ್ಚರಿ ಕ್ರೀಡಾಪಟು ಅತನು ದಾಸ್ ಅವರು ತಮ್ಮ ಪುತ್ರಿ ವೇದಿಕಾರನ್ನು ಪುಣೆಯಲ್ಲಿರುವ ಸೇನಾ ಕ್ರೀಡಾ ಸಂಸ್ಥೆಗೆ ಕರೆದೊಯ್ದರು. 

‘ದೀಪಿಕಾ ಅವರು 2022ರ ಡಿಸೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದಾದ ನಂತರ 19 ಕೆ.ಜಿ. ತೂಕದ ಬಿಲ್ಲನ್ನು ಎತ್ತಬೇಕಾದ ಅವರು ಸ್ನಾಯು ಸೆಳೆತದಿಂದ ಬಳಲಿದರು. ಬಿಲ್ಲು ಮಾತ್ರವಲ್ಲ, ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಡೆಸಲೂ ಅವರಿಗೆ ಕಷ್ಟವಾಗಿತ್ತು. ಹೀಗಾಗಿ ಹೆರಿಗೆ ನಂತರ ಕ್ರೀಡಾಭ್ಯಾಸವನ್ನು ಶೂನ್ಯದಿಂದಲೇ ದೀಪಿಕಾ ಆರಂಭಿಸಿದರು’ ಎಂದು ಅತನು ದಾಸ್ ತಿಳಿಸಿದರು.

ದೀಪಿಕಾ ಅವರು ಗೋವಾದಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಜಯಿಸಿದ್ದರು. ದೀಪಿಕಾ ಅವರಿಗೆ ಕೊರಿಯಾದ ಕಿಮ್ ಹ್ಯುಂಗ ಟಾಕ್ ಅವರು ತರಬೇತುದಾರರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.