ADVERTISEMENT

ಸರಿಯಾದ ಆಟ ಕಂಡಕೊಂಡರೆ ನನಗೆ ಅವಕಾಶ: ಗುಕೇಶ್

ಪಿಟಿಐ
Published 23 ನವೆಂಬರ್ 2024, 22:30 IST
Last Updated 23 ನವೆಂಬರ್ 2024, 22:30 IST
<div class="paragraphs"><p>ಡಿಂಗ್‌ ಲಿರೆನ್ ಮತ್ತು ಡಿ.ಗುಕೇಶ್&nbsp;</p></div>

ಡಿಂಗ್‌ ಲಿರೆನ್ ಮತ್ತು ಡಿ.ಗುಕೇಶ್ 

   

ಸಿಂಗಪುರ: ‘ನನ್ನ ಮುಂದಿರುವ ಕೆಲಸ ಸ್ಪಷ್ಟ. ಪ್ರತಿಯೊಂದು ಪಂದ್ಯದಲ್ಲಿ ಉತ್ತಮ ಆಟ ನೀಡುವುದು. ಪರಿಸ್ಥಿತಿಗೆ ಅನುಗುಣವಾಗಿ ಉತ್ತಮ ನಡೆಗಳನ್ನು ಇಡುವುದು. ಸಕಾರಾತ್ಮಕ ಮನೋಭಾವದಿಂದ ಆ ಕೆಲಸ ಮಾಡಿದರೆ ಎದುರಾಳಿಯ ಫಾರ್ಮ್ ಹೆಚ್ಚು ಗಣನೆಗೆ ಬರುವುದಿಲ್ಲ’ ಎಂದು ವಿಶ್ವ ಚಾಂಪಿಯನ್‌ ಪಟ್ಟಕ್ಕೆ ಚಾಲೆಂಜರ್ ಆಗಿರುವ ಭಾರತದ ಡಿ.ಗುಕೇಶ್ ಹೇಳಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್ ಮತ್ತು ಗುಕೇಶ್ ನಡುವೆ ಸಿಂಗಪುರದ ಸೆಂಟೋಸ್ ದ್ವೀಪದಲ್ಲಿ 14 ಪಂದ್ಯಗಳ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಇದೇ 25ರಿಂದ ಡಿಸೆಂಬರ್ 13ರವರೆಗೆ ನಡೆಯಲಿದೆ.

ADVERTISEMENT

‘ನಾನು ಸ್ವಲ್ಪ ನರ್ವಸ್‌ ಆಗಿರುವುದು ನಿಜ, ಇದು ಒಳ್ಳೆಯದೇ. ಆಟ ಆರಂಭಕ್ಕೆ ತುದಿಗಾಲಲ್ಲಿ ಕಾಯುತ್ತಿದ್ದೇನೆ. ನನ್ನ ಮನಸ್ಸಿನಲ್ಲಿರುವುದು ಒಂದೇ ಯೋಚನೆ– ನನ್ನಿಂದಾದಷ್ಟು ಉತ್ತಮ ಆಟ ನೀಡುವುದು ಮತ್ತು ಮುಂದೇನಾಗುವುದೆಂದು ನೋಡುವುದಷ್ಟೇ‘ ಎಂದು 18 ವರ್ಷ ವಯಸ್ಸಿನ ಗುಕೇಶ್ ಟೂರ್ನಿ ಪೂರ್ವದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ತುಂಬಾ ನಿರಾಳಭಾವದಿಂದ ಇದ್ದೇನೆ ಎಂದು ಹೇಳಲಾರೆ. ಆದರೆ ಒತ್ತಡ ತಾಳಿಕೊಳ್ಳುವುದನ್ನೂ ನಾನು  ತಿಳಿದಿದ್ದೇನೆ. ನನ್ನ ಕೌಶಲಗಳ ಮೇಲೆ ಭರವಸೆಯಿರುವವರೆಗೆ ಬೇರೆ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ’ ಎಂದು ಗುಕೇಶ್ ಆತ್ಮವಿಶ್ವಾಸದ ಮಾತುಗಳನ್ನಾಡಿದರು

ಗುಕೇಶ್ ಕೆಲ ಸಮಯದಿಂದ ಉತ್ತಮ ಲಯದಲ್ಲಿದ್ದರೆ, ಲಿರೆನ್‌ ಈ ಪ್ರತಿಷ್ಠಿತ ಫೈನಲ್‌ಗೆ ಮೊದಲು ಎಂದಿನ ಲಯ ಕಂಡುಕೊಳ್ಳಲಾಗದೇ ಪರದಾಟದಲ್ಲಿದ್ದಾರೆ.

ಟೂರ್ನಿಯ 138 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಏಷ್ಯದ ಆಟಗಾರರೇ ಫೈನಲ್‌ನಲ್ಲಿ ಎದುರಾಳಿಗಳಾಗಿದ್ದಾರೆ. ಟೂರ್ನಿ ಸುಮಾರು ₹20 ಕೋಟಿ ಬಹುಮಾನ ಹಣ ಹೊಂದಿದೆ.

‘ಯಾವುದೇ ಟೂರ್ನಿಯಲ್ಲಿ, ಅದರಲ್ಲೂ ವಿಶ್ವ ಚಾಂಪಿಯನ್‌ಷಿಪ್‌ನಂಥ ಮಹತ್ವದ ಸ್ಪರ್ಧೆಯಲ್ಲಿ  ಭಾರತದ ಪರ ಆಡುವುದು ಗೌರವದ ಮತ್ತು ಹೆಮ್ಮೆಯ ವಿಷಯ. ದೇಶವನ್ನು ಪ್ರತಿನಿಧಿಸುವುದು ಮತ್ತು ದೇಶದ ಜನರ ಭರವಸೆಗಳ ಭಾರ ಹೊರುವುದನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ’ ಎಂದು ಗುಕೇಶ್ ಹೇಳಿದರು.

ತಯಾರಿಗೆ ತೃಪ್ತಿ:

‘ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದ ದಿನದಿಂದಲೇ ತಯಾರಿಯ ಕಡೆ ಗಮನಕೊಟ್ಟಿದ್ದೇನೆ. ಎಷ್ಟು ಸಾಧ್ಯವೊ ಅಷ್ಟು ಉತ್ತಮ ರೀತಿಯಲ್ಲಿ ನಾನು ಮತ್ತು ನನ್ನ ತಂಡ ಈ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ನಡೆಸಿದೆ’ ಎಂದು ಗುಕೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋಚ್‌ ಗ್ರೆಗೋರ್ಸ್‌ ಗಜೆವ್‌ಸ್ಕಿ ಅವರಿಗೆ ಶ್ರೇಯಸ್ಸನ್ನು ಸಲ್ಲಿಸಿದ ಗುಕೇಶ್, ‘2022ರಿಂದ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಆರಂಭದಲ್ಲಿ ಟೂರ್ನಿಗಳ ಆಧಾರದಲ್ಲಿ ತರಬೇತಿ ನಡೆಯುತಿತ್ತು. ಆದರೆ ನಂತರದ ಉತ್ತಮ ಅನುಭವಗಳಿಂದ ಪೂರ್ಣಾವಧಿಗೆ ಅವರಿಂದ ತರಬೇತಿ ಪಡೆಯುಲು ತೀರ್ಮಾನಿಸಿದ್ದೇನೆ’ ಎಂದು ಗುಕೇಶ್ ಹೇಳಿದರು.

‘ಉತ್ತುಂಗದಲ್ಲಿಲ್ಲ:’

ಇತ್ತೀಚಿನ ಕೆಲವು ತಿಂಗಳಿಂದ ಲಯ ಕಂಡುಕೊಳ್ಳಲು ಪರದಾಡುತ್ತಿರುವುದನ್ನು ಒಪ್ಪಿಕೊಂಡ ಲಿರೆನ್‌, ಇತ್ತೀಚಿನ ಕೆಲವು ಟೂರ್ನಿಗಳಲ್ಲಿ ತೋರಿದ ನಿರ್ವಹಣೆಯ ಬಗ್ಗೆ ಪರಾಮರ್ಶೆ ನಡೆಸಿರುವುದಾಗಿ ಹೇಳಿದರು. ಇದರಿಂದ ಉತ್ತಮವಾಗಿ ಸಿದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಅನಿಸಿಕೆ.

‘ನಾನು ಇತ್ತೀಚಿನ ಕೆಲ ತಿಂಗಳಲ್ಲಿ ಆಡಿದ ಪಂದ್ಯಗಳ ಪರಾಮರ್ಶೆಯನ್ನು ಶನಿವಾರ ನಡೆಸಿದೆ. ಗುಣಮಟ್ಟ ಉತ್ತಮವಾಗಿರಲಿಲ್ಲ. ನನ್ನ ಹೋರಾಟದ ಮನೋಭಾವ ಕೂಡ ಮೇಲ್ಮಟ್ಟದಲ್ಲಿರಲಿಲ್ಲ’ ಎಂದು 32 ವರ್ಷ ವಯಸ್ಸಿನ ಲಿರೆನ್ ಹೇಳಿದರು.

‘ಅಲ್ಪ ಅವಧಿಯ ಅನೇಕ ಡ್ರಾಗಳನ್ನು ಆಡಿದ್ದೇನೆ. ಗೆಲ್ಲಬಹುದಾದ ಸ್ಥಿತಿಯಲ್ಲಿರುವ ಪಂದ್ಯಗಳನ್ನೂ ಡ್ರಾ ಮಾಡಿಕೊಂಡಿದ್ದೇನೆ. ಇದೇ ನನ್ನ ಹಿನ್ನಡೆಗೆ ಕಾರಣವೇ ಎಂಬುದು ತಿಳಿದಿಲ್ಲ. ಆದರೆ ನನ್ನ ಉತ್ತುಂಗದ ನಿರ್ವಹಣೆಯಿಂದ ನಾನು ಬಹಳ ದೂರವೇನಿಲ್ಲ’ ಎಂದೂ ಹೇಳಿದರು.

‘ಕಳೆದ ಬಾರಿ ನಾನು ನೆಪು ಜೊತೆ (ರಷ್ಯಾದ ನಿಪೊಮ್‌ನಿಷಿ) ಆಡುವಾಗ ಅವರು ನನಗಿಂತ ದೊಡ್ಡ ವಯಸ್ಸಿನವರಾಗಿದ್ದರು. ಇಲ್ಲಿ ವಯಸ್ಸಿನಲ್ಲಿ ನಾನೇ ಹಿರಿಯವನು. ನನ್ನಲ್ಲಿ ಹೆಚ್ಚು ಅನುಭವವಿದೆ. ಅವರು ಕಿರಿಯನಾದರೂ, ಹಲವು ವಿಷಯಗಳಲ್ಲಿ ಅವರು ತಮ್ಮ ಗುಣಗಳನ್ನು ತೋರಿದ್ದಾರೆ. ಇಬ್ಬರೂ ಉತ್ತಮವಾಗಿ ಆಡಿದರೆ, ಫೈನಲ್ ಹೋರಾಟದಿಂದ ಅತ್ಯುತ್ತಮವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.