ಪ್ಯಾರಿಸ್: ಸತತ ಮೂರನೇ ಫ್ರೆಂಚ್ ಓಪನ್ ಗೆಲುವಿನ ಯತ್ನದಲ್ಲಿರುವ ಪೋಲೆಂಡ್‌ನ ಇಗಾ ಶ್ವಾಂಟೆಕ್ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಲಿಯೊಲಿಯಾ ಜೀನ್‌ಜೀನ್ ಅವರನ್ನು ಸೋಲಿಸಿದರು. ಇದು ಅವರಿಗೆ ಇಲ್ಲಿ ಸತತ 15ನೇ ಗೆಲುವು.
2022ರ ಏಪ್ರಿಲ್‌ನಿಂದ ರ್‍ಯಾಂಕಿಂಗ್‌ನಲ್ಲಿ ಬಹುತೇಕ ಅಗ್ರಪಟ್ಟ ಉಳಿಸಿಕೊಂಡಿರುವ ಶ್ವಾಂಟೆಕ್, ಫಿಲಿಪ್ ಶಾಟಿಯೆ ಕೋರ್ಟ್‌ನಲ್ಲಿ ನಡೆದ ಪಂದ್ಯವನ್ನು 6–1, 6–2 ರಿಂದ ಸುಲಭವಾಗಿ ಗೆದ್ದುಕೊಂಡರು. ಪಂದ್ಯ ಸುಮಾರು ಒಂದು ಗಂಟೆಯಲ್ಲಿ ಮುಗಿಯಿತು.
ಎರಡನೇ ಸೆಟ್‌ನ ಆರಂಭದ ಎರಡು ಗೇಮ್‌ಗಳಲ್ಲಿ 9 ತಪ್ಪುಗಳನ್ನು ಎಸಗಿದ್ದು ಬಿಟ್ಟರೆ ಶ್ವಾಂಟೆಕ್ ಹಿಡಿತ ಸಾಧಿಸಿದ್ದರು. ಅಗ್ರ ಶ್ರೇಯಾಂಕದ ಆಟಗಾರ್ತಿ ಇಲ್ಲಿ 2020, 2022 ಮತ್ತು 2023ರಲ್ಲಿ ಜಯಶಾಲಿಯಾಗಿದ್ದಾರೆ. ಬೆಲ್ಜಿಯಮ್‌ನ ಜಸ್ಟಿನ್ ಹೆನಿನ್ (2005–07) ಅವರು ಇಲ್ಲಿ ಸತತ ಮೂರು ಬಾರಿ ಚಾಂಪಿಯನ್ ಆದ ಕೊನೆಯ ಆಟಗಾರ್ತಿ.
ಅವರ ಮುಂದಿನ ಎದುರಾಳಿ ನಾಲ್ಕು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ನವೊಮಿ ಒಸಾಕಾ. ‘ಇದು ನನ್ನ ತವರೆಂದು ಭಾಸವಾಗುತ್ತಿದೆ. ನನ್ನಿಂದ ಒಳ್ಳೆಯ ಆಟ ಬರುತ್ತಿದೆ’ ಎಂದು ಶ್ವಾಂಟೆಕ್ ಪ್ರತಿಕ್ರಿಯಿಸಿದರು.
ವಿಂಬಲ್ಡನ್ ಚಾಂಪಿಯನ್ ಮರ್ಕೆತಾ ವೊಂದ್ರುಸೋವಾ 6–1, 6–3 ರಿಂದ ರೆಬೆಕಾ ಮಸರೋವಾ ಅವರನ್ನು ಹಿಮ್ಮೆಟ್ಟಿಸಿದರೆ, ಎರಡು ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಫೈನಲ್ ತಲುಪಿರುವ ಆನ್ಸ್ ಜೇಬರ್ (ಟ್ಯುನೀಷಿಯಾ) 6–3, 6–2 ರಿಂದ ಅಮೆರಿಕದ ಸಚಿಯಾ ವಿಕೆರಿ ಅವರನ್ನು ಪರಾಭವಗೊಳಿಸಿದರು.
ಗಾಫ್ ಮುನ್ನಡೆ: ಮೂರನೇ ಶ್ರೇಯಾಂಕದ ಕೊಕೊ ಗಾಫ್ ಮೊದಲ ಸುತ್ತಿನಲ್ಲಿ ರಷ್ಯಾದ ಕ್ವಾಲಿಫೈಯರ್ ಜೂಲಿಯಾ ಅವ್ಡೀವಾ ಅವರನ್ನು 6–1, 6–1 ರಿಂದ ಸೋಲಿಸಲು ತೆಗೆದುಕೊಂಡಿದ್ದು 52 ನಿಮಿಷಗಳನ್ನಷ್ಟೇ. ಇದು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಕೊಕೊ ಅವರಿಗೆ 50ನೇ ಜಯವಾಯಿತು. ಜೂಲಿಯಾ ವಿಶ್ವಕ್ರಮಾಂಕದಲ್ಲಿ 208ನೇ ಸ್ಥಾನದಲ್ಲಿದ್ದಾರೆ.
ಅಮೆರಿಕ ಓಪನ್ ಚಾಂಪಿಯನ್ ಆಗಿರುವ ಗಾಫ್, 2022ರಲ್ಲಿ ಈ ಟೂರ್ನಿಯಲ್ಲಿ ಇಗಾ ಎದುರು ಫೈನಲ್‌ನಲ್ಲಿ ಸೋತಿದ್ದರು.
ಸಿನ್ನರ್‌ಗೆ ಸುಲಭ ಜಯ
ಪುರುಷರ ಸಿಂಗಲ್ಸ್‌ನಲ್ಲಿ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಯಾನಿಕ್ ಸಿನ್ನರ್ 6–3, 6–3, 6–4 ರಿಂದ ಕ್ರಿಸ್ ಯುಬ್ಯಾಂಕ್ಸ್ ಅವರನ್ನು ಮಣಿಸಿದರು. ಸಿನ್ನರ್ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದರು. 10 ಬ್ರೇಕ್‌ಪಾಯಿಂಟ್‌ಗಳಲ್ಲಿ 5 ಅನ್ನು ಪರಿವರ್ತಿಸಿದರು. ಒಂದು ಬಾರಿ ಮಾತ್ರ ಸರ್ವ್ ಕಳೆದುಕೊಂಡರು.
9ನೇ ಶ್ರೇಯಾಂಕದ ಆಟಗಾರ ಸ್ಟಿಫಾನೊಸ್ ಸಿಸಿಪಸ್ (ಗ್ರೀಸ್) ಅವರೂ 7–6 (9–7), 6–4, 6–1 ರಿಂದ ಹಂಗೆರಿಯ ಮಾರ್ಟನ್ ಫುಸ್ಕೊವಿಸ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.