ಕಠ್ಮಂಡು: ಭಾರತದ ಕ್ರೀಡಾ ಪಟುಗಳು ದಕ್ಷಿಣ ಏಷ್ಯ ಕ್ರೀಡೆಗಳಲ್ಲಿ ದಾಖಲೆ 312 ಪದಕಗಳನ್ನು ಬಾಚಿ ಕೊಳ್ಳುವ ಮೂಲಕ ಅಮೋಘ ಸಾಧನೆ ಮಾಡಿದರು. ಮಂಗಳವಾರ ಮುಕ್ತಾ ಯಗೊಂಡ ಈ ಕೂಟದಲ್ಲಿ ಭಾರತ ಸತತ 13ನೇ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.
10 ದಿನಗಳ ಈ ಕೂಟದಲ್ಲಿ ಮೊದಲ ದಿನದಿಂದಲೇ ಪ್ರಾಬಲ್ಯ ಮೆರೆದ ಭಾರತ ಒಟ್ಟು 174 ಚಿನ್ನ, 93 ಬೆಳ್ಳಿ ಮತ್ತು 45 ಕಂಚಿನ ಪದಕಗಳನ್ನು ಪಡೆಯಿತು. 309 ಪದಕಗಳನ್ನು ಗಳಿಸಿದ್ದು ಈ ಹಿಂದಿನ ಉತ್ತಮ ಸಾಧನೆಯಾಗಿತ್ತು.
ಆತಿಥೇಯ ನೇಪಾಳ 206 ಪದಕ ಗಳೊಡನೆ (51 ಚಿನ್ನ, 60 ಬೆಳ್ಳಿ, 95 ಕಂಚು) ಎರಡನೇ ಸ್ಥಾನ ಪಡೆಯಿತು. ಶ್ರೀಲಂಕಾ (40 ಚಿನ್ನ ಸೇರಿ 251 ಪದಕ) ಮೂರನೇ ಸ್ಥಾನ ಗಳಿಸಿತು.
ಕೂಟದ ಕೊನೆಯ ದಿನ 15 ಚಿನ್ನ ಸೇರಿ ಒಟ್ಟು 18 ಪದಕಗಳು ಭಾರತದ ಕ್ರೀಡಾಪಟುಗಳ ಪಾಲಾದವು. ಬಾಕ್ಸಿಂಗ್‌ನಲ್ಲಿ ಆರು ಚಿನ್ನ, ಒಂದು ಬೆಳ್ಳಿಯ ಪದಕಗಳು ಬಂದವು.
ಬ್ಯಾಸ್ಕೆಟ್‌ಬಾಲ್ ಫೈನಲ್‌ನಲ್ಲಿ ಭಾರತ ಪುರುಷರ ತಂಡ 101–62 ರಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ಚಿನ್ನ ಗೆದ್ದುಕೊಂಡಿತು. ಮಹಿಳೆಯರ ತಂಡ 127–46 ರಲ್ಲಿ ನೇಪಾಳ ಮೇಲೆ ಜಯಗಳಿಸಿ ಚಿನ್ನಕ್ಕೆ ಮುತ್ತಿಕ್ಕಿತು. ಸ್ಕ್ವಾಷ್ ನಲ್ಲೂ ಭಾರತ ತಲಾ ಒಂದು ಚಿನ್ನ, ಬೆಳ್ಳಿ ಗೆದ್ದುಕೊಂಡಿತು.
ವಿಕಾಸ್ ಕೃಷ್ಣನ್ (69 ಕೆ.ಜಿ), ಸ್ಪರ್ಷ್ ಕುಮಾರ್ (52 ಕೆ.ಜಿ), ನರೇಂದರ್ (+ 91 ಕೆ.ಜಿ),ಪಿಂಕಿ ರಾಣಿ (ಮಹಿಳೆಯರ 51 ಕೆ.ಜಿ), ಸೋನಿಯಾ ಎಲ್. (57 ಕೆ.ಜಿ), ಮಂಜು ಬಂಬೊರಿಯಾ (64 ಕೆ.ಜಿ) ಚಿನ್ನ ಗೆದ್ದ ಬಾಕ್ಸರ್‌ಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.