ADVERTISEMENT

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕ; ಮೊದಲ ಚಿನ್ನ ತಂದ ಮೀರಾಬಾಯಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 12:29 IST
Last Updated 31 ಜುಲೈ 2022, 12:29 IST
ಮೀರಾಬಾಯಿ ಚಾನು (ಎಡಚಿತ್ರ), ಸಂಕೇತ್ ಸರ್ಗರ್‌ ಹಾಗೂ ಗುರುರಾಜ್‌ ಪೂಜಾರಿ (ಎಎಫ್‌ಪಿ ಚಿತ್ರ)
ಮೀರಾಬಾಯಿ ಚಾನು (ಎಡಚಿತ್ರ), ಸಂಕೇತ್ ಸರ್ಗರ್‌ ಹಾಗೂ ಗುರುರಾಜ್‌ ಪೂಜಾರಿ (ಎಎಫ್‌ಪಿ ಚಿತ್ರ)   

ಬರ್ಮಿಂಗ್‌ಹ್ಯಾಮ್‌: ಮೀರಾಬಾಯಿ ಚಾನು ಅವರು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತರು.

ಶನಿವಾರ ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ 49 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 201 ಕೆ.ಜಿ (88 ಕೆ.ಜಿ+ 113 ಕೆ.ಜಿ) ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದರು. 49 ಕೆ.ಜಿ ವಿಭಾಗದಲ್ಲಿ ತನಗೆ ಯಾರೂ ಸರಿಸಾಟಿಯಲ್ಲ ಎಂಬುದನ್ನು ಸಾಬೀತುಪಡಿಸಿದ ಅವರು ಕೂಟ ದಾಖಲೆಯನ್ನೂ ತಮ್ಮದಾಗಿಸಿಕೊಂಡರು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು ಇಲ್ಲಿ ಚಿನ್ನ ಗೆಲ್ಲುವರು ಎಂದು ನಿರೀಕ್ಷಿಸಲಾಗಿತ್ತು. ಮಾರಿಷಸ್‌ನ ಮೇರಿ ಹನಿತ್ರ (172 ಕೆ.ಜಿ) ಬೆಳ್ಳಿ ಹಾಗೂ ಕೆನಡಾದ ಹನ್ನಾ ಕಮಿನ್‌ಸ್ಕಿ (171 ಕೆ.ಜಿ.) ಕಂಚು ಜಯಿಸಿದರು. ವೇಟ್‌ಲಿಫ್ಟಿಂಗ್‌ನಲ್ಲಿ ಶನಿವಾರ ಭಾರತ ಒಟ್ಟು ಮೂರು ಪದಕ ಜಯಿಸಿತು.

ADVERTISEMENT

ಸಂಕೇತ್‌ಗೆ ಬೆಳ್ಳಿ: ಮೀರಾ ಅವರ ಸಾಧನೆಗೂ ಮುನ್ನ ಸಂಕೇತ್ ಮಹಾದೇವ್‌ ಸರ್ಗರ್‌ ಈ ಬಾರಿಯ ಕೂಟದಲ್ಲಿ ಭಾರತಕ್ಕೆ ಮೊದಲ ಪದಕದ ಸಿಹಿ ನೀಡಿದ್ದರು. ನೋವಿನ ನಡುವೆಯೂ ಮಿಂಚಿದ ಅವರು ಪುರುಷರ 55 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆಮುತ್ತಿಕ್ಕಿದರು.

ಒಟ್ಟು 248 ಕೆ.ಜಿ ಭಾರ (113 ಸ್ನ್ಯಾಚ್‌ + 135 ಕ್ಲೀನ್ ಮತ್ತು ಜರ್ಕ್‌) ಎತ್ತಿದ ಸಂಕೇತ್‌, ಚಿನ್ನದ ಪದಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. 139 ಕೆಜಿ ಕ್ಲೀನ್ ಮತ್ತು ಜೆರ್ಕ್‌ ವಿಭಾಗದ ಭಾರ ಎತ್ತುವ ವೇಳೆ ಮೊಣಕೈ ನೋವಿನಿಂದ ಬಳಲಿದರು. ಹೀಗಾಗಿ ಅಗ್ರಸ್ಥಾನ ಕೇವಲ ಒಂದು ಕೆಜಿ ಅಂತರದಿಂದ ಕೈತಪ್ಪಿತು.

ಮಲೇಷ್ಯಾದ ಮೊಹಮ್ಮದ್ ಅನಿಕ್‌ (ಒಟ್ಟು 249; 107+142) ಕ್ಲೀನ್ ಮತ್ತು ಜರ್ಕ್‌ ವಿಭಾಗದ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಶ್ರೀಲಂಕಾದ ದಿಲಂಕಾ ಇಸುರು ಕುಮಾರ (225; 105 ಕೆಜಿ+ 120 ಕೆಜಿ) ಕಂಚಿನ ಪದಕ ಜಯಿಸಿದರು.

ಸಂಕೇತ್ ಅವರು ಸ್ನ್ಯಾಚ್‌ ವಿಭಾಗದಲ್ಲಿ ಎದುರಾಳಿಗಳಿಗಿಂತ ಆರು ಕೆಜಿ ಹೆಚ್ಚಿನ ಸಾಧನೆ ಮಾಡಿದರು.

‘ಭಾರ ಎತ್ತುವ ಪ್ರಯತ್ನದಲ್ಲಿ ನಾನು ಯಾವುದೇ ತಪ್ಪು ಮಾಡಲಿಲ್ಲ. ಬಲ ಮೊಣಕೈ ಮೇಲೆ ಏಕಾಏಕಿ ಹೆಚ್ಚಿನ ಭಾರ ಬಿದ್ದಂತಾಯಿತು. ಹೀಗಾಗಿ ಹತೋಟಿ ತಪ್ಪಿತು‘ ಎಂದು ನೋವು ಮತ್ತು ಖುಷಿ ಎರಡೂ ಭಾವಗಳ ಸಮ್ಮಿಲನದಲ್ಲಿದ್ದ ಸಂಕೇತ್ ನುಡಿದರು.

ಸಂಕೇತ್ ಅವರ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಭಿನಂದನೆ ಮಹಾಪೂರ ಹರಿದುಬಂದಿದೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಐದು ಚಿನ್ನ ಸೇರಿ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದ್ದರು. ಈ ಬಾರಿಯೂ ಪಾರಮ್ಯ ಮೆರೆಯುವ ಉತ್ಸಾಹದಲ್ಲಿದ್ದಾರೆ.

21 ವರ್ಷದ ಸಂಕೇತ್‌ ಮಹಾರಾಷ್ಟ್ರದ ಸಾಂಗ್ಲಿಯವರಾಗಿದ್ದಾರೆ. ಅವರ ಅಕ್ಕ ಕಾಜೋಲ್ ಕೂಡ ಅಥ್ಲೀಟ್ ಆಗಿದ್ದಾರೆ.

ಪಾನ್‌ಶಾಪ್ ಕೆಲಸ: ಸಂಕೇತ್‌ ಬಾಲ್ಯದ ದಿನಗಳಲ್ಲಿ ತಮ್ಮ ತಂದೆಯ ಪಾನ್‌ಶಾಪ್‌ನಲ್ಲಿ ಗ್ರಾಹಕರಿಗೆ ಚಹಾ ವಿತರಿಸುತ್ತಿದ್ದರು. ಅದರೊಂದಿಗೇ ವಿದ್ಯಾಭ್ಯಾಸ ಮತ್ತು ತರಬೇತಿಯನ್ನೂ ನಡೆಸುತ್ತಿದ್ದರು.

ಕಂಚು ಗೆದ್ದ ಗುರುರಾಜ್‌ ಪೂಜಾರಿ
ಪುರುಷರ 61 ಕೆಜಿ ವಿಭಾಗದ ವೇಟ್‌ಲೀಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಗುರುರಾಜ್‌ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟರು.

2018ರ ಗೋಲ್ಡ್‌ಕೋಸ್ಟ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ, ಕುಂದಾಪುರದ ಗುರುರಾಜ್‌ ಇಲ್ಲಿ ಒಟ್ಟು 269 ಕೆಜಿ (118 ಸ್ನ್ಯಾಚ್‌+ 151 ಕ್ಲೀನ್ ಮತ್ತು ಜರ್ಕ್‌) ಭಾರ ಸಾಧನೆ ಮಾಡುವ ಮೂಲಕ ಮೂರನೇ ಸ್ಥಾನ ಗಳಿಸಿದರು.

ಮಲೇಷ್ಯಾದ ಅಜ್ನಿಲ್ ಬಿನ್‌ ಬಿದಿನ್‌ ಮುಹಮ್ಮದ್‌ 285 ಕೆಜಿ (127+158) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಪಪುವಾ ನ್ಯೂಗಿನಿಯ ಮೋರಿಯ ಬಾರು (273 ಕೆಜಿ: 121+152) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಮೀರಾಬಾಯಿ ಚಾನು ಅವರು ಗೆದ್ದಪ್ರಮುಖ ಪದಕಗಳು

ಟೋಕಿಯೊ ಒಲಿಂಪಿಕ್ಸ್ 2021, 49 ಕೆಜಿ
ವಿಶ್ವ ಚಾಂಪಿಯನ್‌ಷಿಪ್‌ 2017, 48 ಕೆಜಿ ಚಿನ್ನ
ಕಾಮನ್‌ವೆಲ್ತ್‌ ಗೇಮ್ಸ್‌ 2018, 48 ಕೆಜಿ ಚಿನ್ನ
ಕಾಮನ್‌ವೆಲ್ತ್ ಗೇಮ್ಸ್ 2022, 49 ಕೆಜಿ ಚಿನ್ನ
ಕಾಮನ್‌ವೆಲ್ತ್‌ ಗೇಮ್ಸ್‌ 2014, 48 ಕೆಜಿ ಬೆಳ್ಳಿ
ಏಷ್ಯನ್ ಚಾಂಪಿಯನ್‌ಷಿಪ್‌ 2020, 49 ಕೆಜಿ ಕಂಚು
ರಾಷ್ಟ್ರೀಯ ಚಾಂಪಿಯನ್‌ಷಿಪ್ 2020, 49 ಕೆಜಿ ಚಿನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.