ADVERTISEMENT

Paris Olympics | ಆರ್ಚರಿ: ಮೊದಲ ಪದಕದ ವಿಶ್ವಾಸದಲ್ಲಿ ಭಾರತ

ಇಂದಿನಿಂದ ಟೀಮ್‌ ಕ್ವಾಲಿಫಿಕೇಷನ್‌ ಸುತ್ತು

ಪಿಟಿಐ
Published 25 ಜುಲೈ 2024, 0:13 IST
Last Updated 25 ಜುಲೈ 2024, 0:13 IST
ಮಹಿಳಾ ತಂಡದ ಅನುಭವಿ ದೀಪಿಕಾ ಕುಮಾರಿ
ಪಿಟಿಐ ಚಿತ್ರ
ಮಹಿಳಾ ತಂಡದ ಅನುಭವಿ ದೀಪಿಕಾ ಕುಮಾರಿ ಪಿಟಿಐ ಚಿತ್ರ   

ಪ್ಯಾರಿಸ್‌: ಮತ್ತೊಂದು ಒಲಿಂಪಿಕ್ಸ್‌ ಬಂದಿದೆ. ಆದರೆ ಭಾರತ ಆರ್ಚರಿ (ಬಿಲ್ಗಾರರ) ತಂಡದ ‘ಗುರಿ’ ಬದಲಾಗಿಲ್ಲ. ಅದು ಭಾರತಕ್ಕೆ ಈ ಪ್ರತಿಷ್ಠಿತ ಕ್ರೀಡಾ ವೇದಿಕೆಯಲ್ಲಿ ಮೊದಲ ಬಾರಿ ಪದಕ ಗೆಲ್ಲುವುದು.

1988 ರಲ್ಲಿ ಭಾರತದ ಆರ್ಚರಿ ಸ್ಪರ್ಧಿಗಳು ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಈಗ ಪ್ಯಾರಿಸ್‌ನ ಲೆಝಾವಲೀದ್‌ ಗಾರ್ಡನ್ಸ್‌ನಲ್ಲಿ ಗುರುವಾರ ಆರಂಭವಾಗುವ ಕ್ವಾಲಿಫಿಕೇಷನ್‌ ಸುತ್ತಿನ ಮೂಲಕ ಭಾರತ ತಂಡ ಒಲಿಂಪಿಕ್ಸ್‌ ಅಭಿಯಾನ ಆರಂಭಿಸಲಿದೆ.

ಲಂಡನ್‌ ಒಲಿಂಪಿಕ್ಸ್‌ (2012) ನಂತರ ಭಾರತ ಆರು ಸದಸ್ಯರ ಪೂರ್ಣ ಪ್ರಮಾಣದ ತಂಡವನ್ನು ಕಣಕ್ಕಿಳಿಸುತ್ತಿದೆ. ವಿಶ್ವ ರ್‍ಯಾಂಕಿಂಗ್ ಆಧಾರದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಭಾರತ ಐದು ಸ್ಪರ್ಧೆಗಳಲ್ಲಿ (ರಿಕರ್ವ್‌ ವೈಯಕ್ತಿಕ, ಪುರುಷರ ಮತ್ತು ಮಹಿಳಾ ತಂಡ ವಿಭಾಗ ಮತ್ತು ಮಿಶ್ರ ವಿಭಾಗದ) ಕಣಕ್ಕಿಳಿಯದೆ.

ADVERTISEMENT

ಅನುಭವಿಗಳಾದ ತರುಣದೀಪ್ ರಾಯ್ ಮತ್ತು ದೀಪಿಕಾ ಕುಮಾರಿ ಅವರಿಬ್ಬರಿಗೂ ಇದು ನಾಲ್ಕನೇ ಒಲಿಂಪಿಕ್ಸ್‌. ಇವರು ಯುವ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲು 10ರೊಳಗೆ ಸ್ಥಾನ ಪಡೆದು ಅನುಕೂಲಕರ ‘ಡ್ರಾ’ ಪಡೆಯುವ ವಿಶ್ವಾಸವನ್ನು ತಂಡ ಹೊಂದಿದೆ.

ಕ್ವಾಲಿಫಿಕೇಷನ್ ಸುತ್ತಿನಲ್ಲಿ 53 ರಾಷ್ಟ್ರಗಳ 128 ಮಂದಿ ಭಾಗವಹಿಸಲಿದ್ದಾರೆ. 72 ಬಾಣವಗಳನ್ನು ಬಿಡಲಿದ್ದಾರೆ. ಇಲ್ಲಿ ಪಡೆಯುವ ಸ್ಕೋರ್ ಆಧಾರದಲ್ಲಿ ನಾಕೌಟ್‌ ಹಂತಕ್ಕೆ ಶ್ರೇಯಾಂಕಗಳನ್ನು ನೀಡಲಾಗುತ್ತದೆ. ಮಹಿಳಾ ತಂಡ ಫೈನಲ್ ಭಾನುವಾರ ನಿಗದಿಯಾಗಿದೆ.

ಕ್ವಾಲಿಫೈಯಿಂಗ್ ಸುತ್ತು ಭಾರತಕ್ಕೆ ಮಹತ್ವದ್ದು. ಈ ಹಿಂದೆ ಶ್ರೇಯಾಂಕದಲ್ಲಿ ಕೆಳಗಿನ ಸ್ಥಾನ ಪಡೆದು ನಂತರ ದಕ್ಷಿಣ ಕೊರಿಯಾದಂಥ ಹೆವಿವೇಟ್‌ ತಂಡಗಳಿಗೆ ಸೋತು ಹೊರಬಿದ್ದ ನಿದರ್ಶನಗಳಿವೆ.

ಲಯಕ್ಕೆ ಸಂಬಂಧಿಸಿ ಈ ಬಾರಿ ಪುರುಷರ ತಂಡದ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ. ಶಾಂಘೈನಲ್ಲಿ ಬಲಿಷ್ಠ ದಕ್ಷಿಣ ಕೊರಿಯವನ್ನು ಮೊದಲ ಬಾರಿ ಫೈನಲ್‌ನಲ್ಲಿ ಸೋಲಿಸಿ ಭಾರತ ತಂಡ ವಿಶ್ವಕಪ್ ಗೆದ್ದುಕೊಂಡಿತ್ತು.

ತರುಣ್ ದೀಪ್ ಜೊತೆ, ಟೋಕಿಯೊ ಒಲಿಂಪಿಯನ್ ಪ್ರವೀಣ್ ಜಾಧವ್‌, ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಧೀರಜ್ ಬೊಮ್ಮದೇವರ ತಂಡದಲ್ಲಿದ್ದಾರೆ. ಧೀರಜ್ ಇಟಲಿಯಲ್ಲಿ ನಡೆದ ವಿಶ್ವ ಕಪ್‌ ಸ್ಟೇಜ್‌–3 ಕೂಟದಲ್ಲಿ 2021ರ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಸ್ಪರ್ಧಿಯನ್ನು ಮಣಿಸಿ ಕಂಚಿನ ಪದಕ ಗಳಿಸಿದ್ದರು. ಧೀರಜ್‌, ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಎಂಥಾ ಒತ್ತಡದ ಸನ್ನಿವೇಶದಲ್ಲೂ ‘ಕೂಲ್‌’ ಆಗಿ ಇರುವುದಕ್ಕೆ ಧೀರಜ್‌ ಹೆಸರು ಪಡೆದಿದ್ದಾರೆ.

ಮಹಿಳಾ ವಿಭಾಗದಲ್ಲಿ ದೀಪಿಕಾ ಕಳೆದ ಬಾರಿ ದಕ್ಷಿಣ ಕೊರಿಯಾ ಸ್ಪರ್ಧಿ ಆ್ಯನ್‌ ಸನ್‌ಗೆ ಸೋತಿದ್ದರು. ಈ ಬಾರಿ ಆ್ಯನ್‌ ಸ್ಪರ್ಧಿಸುತ್ತಿಲ್ಲ. ಆದರೆ ಅವರ ಬದಲು ತಂಡದಲ್ಲಿರುವ ಲಿಮ್‌ ಸಿ ಹಿಯೊನ್ ಎರಡು ಬಾರಿ ದೀಪಿಕಾ ಅವರನ್ನು ಸೋಲಿಸಿದ್ದಾರೆ. ‘ಏಕಾಗ್ರತೆ ಕಾಪಾಡಿಕೊಂಡಲ್ಲಿ ದೀಪಿಕಾ ಅವರನ್ನು ಸೋಲಿಸುವುದು ಕಷ್ಟ’ ಎಂದು ತಂಡದ ಹೈ ಪರ್ಫಾಮೆನ್ಸ್‌ ನಿರ್ದೇಶಕ ಸಂಜೀವ ಸಿಂಗ್‌ ಹೇಳಿದರು.

ಮಹಿಳಾ ವಿಭಾಗದ ಇತರ ಸ್ಪರ್ಧಿಗಳಾದ ಅಂಕಿತಾ ಭಕತ್ ಮತ್ತು ಭಜನ್‌ ಕೌರ್‌ ಅವರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

2000ರ ಸಿಡ್ನಿ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಪಡೆದಿರಲಿಲ್ಲ. ಉಳಿದಂತೆ ಭಾಗವಹಿಸಿದ ಸಂದರ್ಭಗಳಲ್ಲಿ ಎಂದೂ ಕ್ವಾರ್ಟರ್‌ಫೈನಲ್ ತಡೆ ದಾಟಿಲ್ಲ.

ಆರ್ಚರಿ ತಂಡಕ್ಕೆ ಕೋಚ್‌ ಅಲಭ್ಯ!

ಆರ್ಚರಿ ತಂಡದ ವಿದೇಶಿ ಕೋಚ್‌ ಬೇಕ್ ವೂಂಗ್‌ ಕಿ ಅವರು ಪ್ಯಾರಿಸ್‌ ಕ್ರೀಡೆಗಳಿಗೆ ‘ಮಾನ್ಯತಾ ಪತ್ರ’ ಸಿಗದೇ ಭಾರತಕ್ಕೆ ಮರಳಿದ್ದಾರೆ. ಇದರಿಂದ ಮುಖ್ಯಕೋಚ್‌ ಇಲ್ಲದೇ ತಂಡ ಭಾಗವಹಿಸಬೇಕಾಗಿದೆ. ವಾರ್ಷಿಕ ₹1ಕೋಟಿ ಮೊತ್ತಕ್ಕೆ ಗುತ್ತಿಗೆ ಮೇಲೆ ಬೇಕ್ ವೂಂಗ್ ಅವರ ಸೇವೆ ಪಡೆಯಲಾಗಿತ್ತು. ಅವರು ಫ್ರಾನ್ಸ್‌ನ ಜೂಕ್‌ನಲ್ಲಿ ನಡೆದ ಸಿದ್ಧತಾ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ ಭಾರತ ಆರ್ಚರಿ ಸಂಸ್ಥೆ (ಎಎಐ) ಅವರಿಗೆ ಮಾನ್ಯತೆ ದೊರಕಿಸಿಕೊಡುವಲ್ಲಿ ವಿಫಲವಾಯಿತು. ಇದಕ್ಕೆ ಅದು ಐಒಎಯನ್ನು ದೂರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.