ತೈಪೆ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ವಿಶ್ವ ರ‍್ಯಾಂಕಿಂಗ್ ಟೂರ್ನಿಯ ಆರ್ಚರಿ ಸ್ಪರ್ಧೆಯಲ್ಲಿ ಭಾರತವು ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಪದಕ ಗೆದ್ದ ರಾಷ್ಟ್ರಗಳ ಪಟ್ಟಿಯಲ್ಲಿ ಇರಾನ್‌ನೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದೆ.
ಟೂರ್ನಿಯ ಕೊನೆಯ ದಿನವಾದ ಮಂಗಳವಾರ ಪುರುಷರ ರೀಕರ್ವ್ ವಿಭಾಗದಲ್ಲಿ ಭಾರತ ತಂಡವು ಬೆಳ್ಳಿಯ ಸಾಧನೆ ಮಾಡಿದೆ.
ಮಹಿಳೆಯರ ಕಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ದಿವ್ಯಾ ದಯಾಳ್ ಬೆಳ್ಳಿ ಪದಕ ಗೆದ್ದರು. ಭಾರತದ ಆರ್ಚರಿ ಪಟು ಅಮೋಘ ಪೈಪೋಟಿ ನೀಡಿದರು. ಆದರೆ ಕೊನೆಯಲ್ಲಿ ಸ್ಥಳೀಯ ಆಟಗಾರ್ತಿ ತಿಂಗ್ ತಿಂಗ್ ವು ಅವರ ಸವಾಲು ಮೀರಲು ದಿವ್ಯಾ ವಿಫಲರಾದರು.
ಮಹಿಳೆಯರ ರೀಕರ್ವ್ ವಿಭಾಗದಲ್ಲಿ ಭಾರತ ತಂಡವು ಜಪಾನ್ ವಿರುದ್ಧ 6–2ರಿಂದ ಗೆದ್ದು ಕಂಚಿನ ಪದಕಕ್ಕೆ ಕೊರಳೊಡ್ಡಿತು. ಪುರುಷರ ರೀಕರ್ವ್ ವಿಭಾಗದಲ್ಲಿ ಭಾರತದ ಶುಕ್ಮನಿ ಬಾಬ್ರೇಕರ್, ಧೀರಜ್ ಬೊಮ್ಮದೇವರಾ ಹಾಗೂ ಗೋರಾ ಹೊ ಜೋಡಿಯು ಬೆಳ್ಳಿ ಪದಕ ಗೆದ್ದಿತು. ದಕ್ಷಿಣ ಕೊರಿಯಾದ ಜಹೇನ್ ಬೆ, ತಯೊಂಗ್ ಜಿಯಾಂಗ್ ಹಾಗೂ ಕ್ಯು ಚಾನ್ ಕಿಮ್ ಜೋಡಿಯುಭಾರತದ ಜೋಡಿಯನ್ನು ಕೊನೆಯ ಸುತ್ತಿನಲ್ಲಿ ಕಟ್ಟಿಹಾಕಿತು.
ಸೋಮವಾರ ನಡೆದ ಮಿಶ್ರ ವಿಭಾಗದಲ್ಲಿ ಭಾರತದ ಶುಕ್ಮನಿ ಬಾಬ್ರೇಕರ್ ಹಾಗೂ ರಿಧಿ ಜೋಡಿಯು ಬೆಳ್ಳಿಯ ಸಾಧನೆ ಮಾಡಿತ್ತು.
ಪದಕಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ತಂಡವು ಅಗ್ರಸ್ಥಾನ ಪಡೆದರೆ ತೈಪೆಯು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.