ಸಾಂಟಾಂಡೆರ್, ಸ್ಪೇನ್: ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಿಶ್ರ ತಂಡ ವಿಭಾಗದ ‘ಬಿ’ ಗುಂಪಿನ ಪಂದ್ಯದಲ್ಲಿ 3–2 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದರು.
ಯುವ ಆಟಗಾರ್ತಿ ಉನ್ನತಿ ಹೂಡಾ ಅವರ ಉತ್ತಮ ಆಟ ಭಾರತದ ಗೆಲುವಿಗೆ ಹಾದಿಯೊದಗಿಸಿತು. ಆರಂಭದಲ್ಲಿ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಅರ್ಶ್ ಮೊಹಮ್ಮದ್ ಮತ್ತು ಅಭಿನವ್ ಠಾಕೂರ್ 12–21, 17–21 ರಲ್ಲಿ ರಿಕಿ ಟಾಂಗ್– ಒಟ್ಟೊ ಕ್ಸಿಂಗ್ ಜಾವೊ ಎದುರು ಸೋತರು.
ಎರಡನೇ ಪಂದ್ಯದಲ್ಲಿ ಕಣಕ್ಕಿಳಿದ ಉನ್ನತಿ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 21–6, 21–9 ರಲ್ಲಿ ಸಿಡ್ನಿ ಗೋ ಅವರನ್ನು ಮಣಿಸಿ ಭಾರತಕ್ಕೆ 1–1 ರಲ್ಲಿ ಸಮಬಲ ತಂದಿತ್ತರು.
ಆದರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭರತ್ ರಾಘವ್ 19–21, 21–16, 15–21 ರಲ್ಲಿ ಜಾಕ್ ಯು ಎದುರು ಸೋತದ್ದರಿಂದ ಆಸ್ಟ್ರೇಲಿಯಾ 2–1 ರಲ್ಲಿ ಮುನ್ನಡೆ ಸಾಧಿಸಿತು.
ಮಹಿಳೆಯರ ಡಬಲ್ಸ್‌ನಲ್ಲಿ ಆಡಿದ ಇಶಾರಾಣಿ ಬರುವಾ ಮತ್ತು ದೇವಿಕಾ ಸಿಹಾಗ್ 21–8, 21–8 ರಲ್ಲಿ ಡೇನಿಯಾ ಎಂಗೊರೊ– ಕ್ಯಾಥರಿನಾ ಚಿಯಾ ಯು ತಾನ್ ಅವರನ್ನು ಮಣಿಸಿ ಪಂದ್ಯವನ್ನು ಮತ್ತೆ ಸಮಸ್ಥಿತಿಗೆ ತಂದರು. ಇದರಿಂದ ಫಲಿತಾಂಶ ನಿರ್ಣಯಿಸಲು ಮಿಶ್ರ ಡಬಲ್ಸ್ ಪಂದ್ಯ ನಿರ್ಣಾಯಕ ಎನಿಸಿತು.
ಭಾರತದ ವಿಘ್ನೇಶ್ ತತಿನೇನಿ ಮತ್ತು ಶ್ರೀನಿಧಿ ನಾರಾಯಣನ್ 21–12, 21–16 ರಲ್ಲಿ ಒಟ್ಟೊ ಕ್ಸಿಂಗ್ ಜಾವೊ– ಯೂಲಿನ್ ಜಾಂಗ್ ಅವರನ್ನು ಮಣಿಸಿ ಗೆಲುವಿಗೆ ಕಾರಣರಾದರು.
ಮೊದಲ ಪಂದ್ಯದಲ್ಲಿ ಐಸ್‌ಲ್ಯಾಂಡ್ ತಂಡವನ್ನು 5–0 ರಲ್ಲಿ ಮಣಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಚೀನಾ ಕೈಯಲ್ಲಿ 0–5 ರಲ್ಲಿ ಪರಾಭವಗೊಂಡಿತ್ತು. ಕೊನೆಯ ಪಂದ್ಯದಲ್ಲಿ ಸ್ಲೊವೇನಿಯಾ ತಂಡದ ಸವಾಲು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.