ರಾಜಗೀರ್ (ಬಿಹಾರ): ಅಜೇಯ ಓಟವನ್ನು ಮುಂದುವರಿಸಿದ ಹಾಲಿ ಚಾಂಪಿಯನ್ ಭಾರತ ತಂಡ 2–0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮಂಗಳವಾರ ಫೈನಲ್ ಪ್ರವೇಶಿಸಿತು.
ಉಪನಾಯಕಿ ನವನೀತ್ ಕೌರ್ ಅವರು 48ನೇ ನಿಮಿಷ ಪೆನಾಲ್ಟಿ ಸ್ಟ್ರೋಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರೆ, 56ನೇ ನಿಮಿಷ ಲಾಲ್ರೆಂಸಿಯಾಮಿ ಫೀಲ್ಡ್ ಗೋಲಿನ ಮೂಲಕ ಗೆಲುವಿನ ಅಂತರ ಹೆಚ್ಚಿಸಿದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಹಲವು ಸ್ಕೋರಿಂಗ್ ಅವಕಾಶಗಳು ದೊರೆತಿದ್ದವು. 13 ಪೆನಾಲ್ಟಿ ಕಾರ್ನರ್‌ಗಳು ಅವಕಾಶಗಳೂ ವ್ಯರ್ಥವಾದವು.
ಆತಿಥೇಯ ತಂಡವು ಬುಧವಾರ ನಡೆಯುವ ಫೈನಲ್‌ನಲ್ಲಿ ಚೀನಾ ತಂಡವನ್ನು ಎದುರಿಸಲಿದೆ. ಚೀನಾ ದಿನದ ಮೊದಲ ಸೆಮಿಫೈನಲ್‌ನಲ್ಲಿ 3–1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಪರಾಭವಗೊಳಿಸಿತ್ತು.
ಮಲೇಷ್ಯಾ ಮತ್ತು ಜಪಾನ್ ತಂಡಗಳು ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸಲು ಸೆಣಸಾಡಲಿವೆ. ದಕ್ಷಿಣ ಕೊರಿಯಾ ದಿನದ ಇನ್ನೊಂದು ಪಂದ್ಯದಲ್ಲಿ 3–0 ಯಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿ ಐದನೇ ಸ್ಥಾನ ಪಡೆಯಿತು.
ಭಾರತ ತಂಡದವರು ಲೀಗ್ ಪಂದ್ಯದ ರೀತಿ ಸೆಮಿಫೈನಲ್‌ನಲ್ಲೂ ಆಕ್ರಮಣದ ಆಟವನ್ನು ಮುಂದುವರಿಸಿ ಜಪಾನ್ ತಂಡದ ಮೇಲೆ ಒತ್ತಡ ಹೇರಿದರು. ಜಪಾನ್ ತಂಡದ ಆವರಣದಲ್ಲೇ ಹೆಚ್ಚಿನ ಆವಧಿಯಲ್ಲಿ ಆಟ ಸಾಗಿದ್ದ ಪರಿಣಾಮ, ಭಾರತದ ರಕ್ಷಣಾ ವಿಭಾಗಕ್ಕೆ ಪರೀಕ್ಷೆಯೇ ಎದುರಾಗಲಿಲ್ಲ.
ಐದನೇ ನಿಮಿಷ ನಾಯಕಿ ಸಲೀಮಾ ಟೆಟೆ ಅವರ ಗೋಲು ಪ್ರಯತ್ನವನ್ನು ಜಪಾನ್‌ನ ಗೋಲ್‌ಕೀಪರ್ ಯು ಕುಡೊ ವಿಫಲಗೊಳಿಸಿದರು. ಭಾರತದ ಆಟಗಾರ್ತಿಯರ ಸತತ ದಾಳಿಯ ಪ್ರಯತ್ನಗಳಿಂದ ಮತ್ತೆರಡು ಪೆನಾಲ್ಟಿ ಕಾರ್ನರ್‌ಗಳು ದೊರೆತವು. ಆದರೆ ಕುಡೊ ಜಾಗೃತರಾಗಿದ್ದು ನವನೀತ್ ಕೌರ್ ಮತ್ತು ದೀಪಿಕಾ ಅವರ ಗೋಲು ಯತ್ನಗಳಿಗೆ ಅಡ್ಡಿಯಾದರು.
ಎರಡನೇ ಕ್ವಾರ್ಟರ್‌ನಲ್ಲಿ ಮೂರು ನಿಮಿಷಗಳಾಗುವಷ್ಟರಲ್ಲಿ ಭಾರತಕ್ಕೆ ಸತತವಾಗಿ ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತರೂ ಅವುಗಳಲ್ಲಿ ಯಶಸ್ಸು ದೊರೆಯಲಿಲ್ಲ. 21ನೇ ನಿಮಿಷದಲ್ಲೂ ಕಾರ್ನರ್‌ಗಳು ದೊರೆತವು. ಆದರೆ ಕುಡೊ ಅವರನ್ನು ವಂಚಿಸಲಾಗಲಿಲ್ಲ. ಒಮ್ಮೆಯಂತೂ ತಮ್ಮ ಬಲಗಾಲನ್ನು ಪೂರ್ಣವಾಗಿ ಚಾಚಿದ ಎದುರಾಳಿ ಗೋಲ್‌ಕೀಪರ್, ದೀಪಿಕಾ ಅವರಿಗೆ ಗೋಲು ನಿರಾಕರಿಸಿದರು.
ವಿರಾಮದ ನಂತರವೂ ಭಾರತದ ಮೇಲುಗೈ ಮುಂದುವರಿಯಿತು. 31ನೇ ನಿಮಿಷ, 41 ನಿಮಿಷದಲ್ಲೂ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಆಟಗಾರ್ತಿಯರು ಯಶ ಕಾಣಲಿಲ್ಲ. 47ನೇ ನಿಮಿಷ 12ನೇ ಪೆನಾಲ್ಟಿ ಕಾರ್ನರ್ ಅವಕಾಶವೂ ವ್ಯರ್ಥವಾಯಿತು.
ಆದರೆ ಮರುನಿಮಿಷ ದೀಪಿಕಾ ಅವರನ್ನು ಫೌಲ್ ಮಾಡಿದ್ದರಿಂದ ದೊರೆತ ‘ಪೆನಾಲ್ಟಿ’ ಅವಕಾಶವನ್ನು ಪರಿವರ್ತಿಸುವಲ್ಲಿ ನವನೀತ್ ಕೌರ್ ಯಶಸ್ವಿಯಾದರು. ಈ ಗೋಲಿನಿಂದ ಭಾರತದ ಪಾಳೆಯದಲ್ಲಿ ನವೋಲ್ಲಾಸ ಮನೆಮಾಡಿತು.
56ನೇ ನಿಮಿಷ ಭಾರತ ಫೀಲ್ಡ್ ಗೋಲಿನ ಮೂಲಕ ಮುನ್ನಡೆಯನ್ನು 2–0ಗೆ ಹೆಚ್ಚಿಸಿತು. ಸುನೆಲಿಟಾ ಟೊಪ್ಪೊ ಅವರು ಕೌಶಲದ ಡ್ರಿಬ್ಲಿಂಗ್ ಮೂಲಕ ನೀಡಿದ ಪಾಸ್‌ನಲ್ಲಿ ಲಾಲ್ರೆಂಸಿಯಾಮಿ ಚೆಂಡನ್ನು ಜಪಾನ್ ಗೋಲಿನೊಳಕ್ಕೆ ನಿರ್ದೇಶಿಸಿದರು.
ಜಪಾನ್ ತಂಡಕ್ಕೆ ಅಪರೂಪವೆಂಬಂತೆ ಪಂದ್ಯದ ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ದೊರೆತರೂ, ಪ್ರಬಲವಾಗಿದ್ದ ಭಾರತ ತಂಡದ ರಕ್ಷಣೆ ಗೋಲಿಗೆ ಅವಕಾಶ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.