ಕ್ಯಾನ್‌ಬೆರಾ: ಮೂರು ರಾಷ್ಟ್ರಗಳ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ, ಶರ್ಮಿಳಾ ದೇವಿ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ 4–1 ಅಂತರದಿಂದ ಜಯ ಸಾಧಿಸಿತು.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳೆಯರು ಆರಂಭಿಕ ಮೇಲುಗೈ ಸಾಧಿಸಿದ್ದರು. ಪಂದ್ಯ ಆರಂಭವಾಗಿ ನಾಲ್ಕು ನಿಮಿಷಗಳಾಗುವುದರೊಳಗೆ ಕಿವೀಸ್ ಪಡೆಯ ಓಲಿವಿಯಾ ಶಾನನ್ ಗೋಲು ಬಾರಿಸಿ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಭಾರತ ಎಚ್ಚರಿಕೆಯ ಆಟವಾಡಿತು. 12ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಶರ್ಮಿಳಾ ಹೋರಾಟವನ್ನು ಸಮಬಲಗೊಳಿಸಿದರು.
27ನೇ ನಿಮಿಷದಲ್ಲಿ ಬ್ಯೂಟಿ ಡಂಗ್‌ಡಂಗ್ ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಬಳಿಕ 43ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಶರ್ಮಿಳಾ ಜಯದ ಹಾದಿಯನ್ನು ಸುಗಮಗೊಳಿಸಿದರು. 48ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಯುವ ಆಟಗಾರ್ತಿ ಲಾಲ್‌ರಿಂದಿಕಿ ತಂಡದ ಪರ ನಾಲ್ಕನೇ ಗೋಲು ಗಳಿಸಿದರು.
ಸರಣಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ,ನ್ಯೂಜಿಲೆಂಡ್ ವಿರುದ್ಧ 2–0 ಅಂತರದ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 1–1 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು. ಕೊನೆಯ ಪಂದ್ಯವುಭಾನುವಾರ ನಡೆಯಲಿದ್ದು,ಆಸ್ಟ್ರೇಲಿಯಾ ಹಾಗೂ ಭಾರತ ಸೆಣಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.