ರಾಜಗೀರ್, ಬಿಹಾರ: ಭಾರತ ವನಿತೆಯರ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದೆ. ಟೂರ್ನಿಯಲ್ಲಿ ಸತತ ಎರಡನೇ ಜಯಸಾಧಿಸಿದೆ.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 3–2ರಿಂದ ದಕ್ಷಿಣ ಕೊರಿಯಾ ವಿರುದ್ಧ ಗೆದ್ದಿತು.
ಪಂದ್ಯದ ಪ್ರಥಮಾರ್ಧದಲ್ಲಿಯೇ ಭಾರತವು 2–0ಯಿಂದ ಮುನ್ನಡೆ ಸಾಧಿಸಿತು. ತಂಡದ ಸಂಗೀತಾ ಕುಮಾರಿ (3ನೇ ನಿಮಿಷ) ಮತ್ತು ದೀಪಿಕಾ (20ನೇ ನಿಮಿಷ) ಅವರು ಗೋಲು ಗಳಿಸಿದರು.
ಇದಾದ ನಂತರ ಕೊರಿಯಾ ತಂಡವೂ ತಿರುಗೇಟು ನೀಡಿತು. ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಎದುರಾಳಿಗಳ ಮೇಲೆ ಒತ್ತಡ ಹೇರಿತು. ತಂಡದ ಯೂರಿ ಲೀ (34ನೇ ನಿ) ಮತ್ತು ನಾಯಕಿ ಯುನ್ಬಿ ಚೆಯಾನ್ (38ನೇ ನಿ) ಅವರು ಗೋಲು ಗಳಿಸಿ ಸಮಬಲ ಸಾಧಿಸಿದರು. ಇದರ ನಂತರ ಸುಮಾರು 19 ನಿಮಿಷಗಳ ಆಟವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಉಭಯ ತಂಡಗಳ ನಡುವಿನ ಸೆಣಸಾಟವು ಕಾವೇರಿಸಿತ್ತು.
ಎರಡೂ ತಂಡಗಳ ಆಟಗಾರರು ಮಾಡಿದ ಗೋಲು ಗಳಿಕೆಯ ಪ್ರಯತ್ನಗಳು ಕೈಗೂಡಲಿಲ್ಲ. ಈ ಜಿದ್ದಾಜಿದ್ದಿಗೆ ಭಾರತದ ದೀಪಿಕಾ (57ನೇ ನಿ) ತೆರೆ ಎಳೆದರು. ಗೋಲು ಗಳಿಸಿದ ಅವರು ಭಾರತಕ್ಕೆ 3–2ರ ಮುನ್ನಡೆ ತಂದುಕೊಟ್ಟರು. ನಂತರದ ಆಟದಲ್ಲಿ ರಕ್ಷಣಾತ್ಮಕವಾಗಿ ಆಡಿದ ಭಾರತವು ಗೋಲು ಗಳಿಕೆಗೆ ತಡೆಯೊಡ್ಡಿತು.
ಭಾರತ ತಂಡವು ಮೊದಲ ಪಂದ್ಯದಲ್ಲಿ 4–0ಯಿಂದ ಮಲೇಷ್ಯಾ ವಿರುದ್ಧ ಜಯಿಸಿತ್ತು. ಗುರುವಾರ ನಡೆಯುವ ಮೂರನೇ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.
ಚೀನಾಗೆ ಜಯ: ಒಲಿಂಪಿಕ್ ಕೂಟದ ಬೆಳ್ಳಿ ಪದಕ ವಿಜೇತ ತಂಡ ಚೀನಾ 5–0ಯಿಂದ ಮಲೇಷ್ಯಾ ವಿರುದ್ಧ ಗೆದ್ದಿತು. ಇದರೊಂದಿಗೆ ಸತತ ಎರಡನೇ ಜಯ ಸಾಧಿಸಿತು.
ಇನ್ನೊಂದು ಪಂದ್ಯದಲ್ಲಿ ಥಾಯ್ಲೆಂಡ್ ಮತ್ತು ಜಪಾನ್ ಪಂದ್ಯವು 1–1ರಿಂದ ಸಮಬಲವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.