ಬುಡಾಪೆಸ್ಟ್ : ಭಾರತ ಚೆಸ್ ಒಲಿಂಪಿಯಾಡ್‌ನಲ್ಲಿ ಭಾನುವಾರ ಇತಿಹಾಸ ನಿರ್ಮಿಸಿತು. 45ನೇ ಚೆಸ್ ಒಲಿಂಪಿಯಾಡ್‌ನ ಓಪನ್ ಮತ್ತು ಮಹಿಳೆಯರ ವಿಭಾಗ– ಎರಡರಲ್ಲೂ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ತಂಡ ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಪ್ರದರ್ಶಿಸಿತು.
ಓಪನ್ ವಿಭಾಗದಲ್ಲಿ ಶನಿವಾರವೇ ಭಾರತ ಚಿನ್ನ ಗೆಲ್ಲುವುದು ಖಚಿತವಾಗಿತ್ತು. ಅಂತಿಮ ಸುತ್ತಿನಲ್ಲಿ ಭಾರತ 3.5–0.5 ರಿಂದ ಸ್ಲೊವೇನಿಯಾ ತಂಡವನ್ನು ಮಣಿಸಿತು. ಡಿ.ಗುಕೇಶ್, ಅರ್ಜುನ್ ಇರಿಗೇಶಿ, ರಮೇಶಬಾಬು ಪ್ರಜ್ಞಾನಂದ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರು. ವಿದಿತ್ ಗುಜರಾತಿ, ಎದುರಾಳಿ ವಿರುದ್ಧ ಡ್ರಾ ಮಾಡಿಕೊಂಡರು.
ಮಹಿಳೆಯರ ವಿಭಾಗದಲ್ಲಿ, ಅಗ್ರ ಶ್ರೇಯಾಂಕ ಪಡೆದಿದ್ದ ಭಾರತ 3.5–0.5 ರಿಂದ ಅಜರ್‌ಬೈಜಾನ್ ತಂಡವನ್ನು ಮಣಿಸಿತು.
ಒಲಿಂಪಿಯಾಡ್‌ನಲ್ಲಿ ಭಾರತ ಓಪನ್ ವಿಭಾಗದಲ್ಲಿ 2014ರಲ್ಲಿ (ನಾರ್ವೆಯ ಟ್ರೊಮ್ಸೊ) ಮತ್ತು 2022ರಲ್ಲಿ (ಚೆನ್ನೈ) ಕಂಚಿನ ಪದಕ ಗೆದ್ದುಕೊಂಡಿದ್ದು, ಮಹಿಳಾ ತಂಡ 2022ರ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು ಇದುವರೆಗಿನ ಪ್ರಮಖ ಸಾಧನೆಯಾಗಿತ್ತು.
ಅಮೋಘ ಸಾಧನೆ: ವಿಶ್ವ ಚಾಂಪಿಯನ್ ಚಾಲೆಂಜರ್ ಡಿ.ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅರ್ಜುನ್ 11 ಪಂದ್ಯಗಳಿಂದ 10 ಪಾಯಿಂಟ್ಸ್ (9 ಗೆಲುವು, 2 ಡ್ರಾ) ಕಲೆಹಾಕಿದರು. ಇದೇ ವರ್ಷದ ಕೊನೆಯಲ್ಲಿ ವಿಶ್ವ ಚಾಂಪಿಯನ್‌ಷಿಪ್ ಫೈನಲ್ ಆಡಲಿರುವ ಗುಕೇಶ್ ಆಡಿದ 10 ಪಂದ್ಯಗಳಿಂದ 9 ಪಾಯಿಂಟ್ಸ್ (8 ಜಯ, 2 ಡ್ರಾ) ಸಂಗ್ರಹಿಸಿ ಅಮೋಘ ಸಾಧನೆ ಮೆರೆದರು.
ಕಪ್ಪು ಕಾಯಿಗಳಲ್ಲಿ ಆಡಿದ 18 ವರ್ಷ ವಯಸ್ಸಿನ ದೊಮ್ಮರಾಜು ಗುಕೇಶ್ ಮೊದಲ ಬೋರ್ಡ್‌ನಲ್ಲಿ ಪ್ರಯಾಸಪಟ್ಟು ವ್ಲಾದಿಮಿರ್ ಫೆಡೊಸೀವ್ ಅವರನ್ನು ಸೋಲಿಸಿದರು. ಆದರೆ ಈ ಆಟದಲ್ಲಿ ಚೆನ್ನೈ ಆಟಗಾರನ ತಂತ್ರಗಾರಿಕೆ ಮೆಚ್ಚುವಂತಿತ್ತು. ಮೂರನೇ ಬೋರ್ಡ್‌ನಲ್ಲಿ ಅರ್ಜುನ್ ಕೂಡ ಕಪ್ಪುಕಾಯಿಗಳಲ್ಲಿ ಆಡಿ ಯಾನ್ ಸುಬೆಲಿ ಅವರನ್ನು ಸೋಲಿಸಿದರು.
ಎರಡನೇ ಬೋರ್ಡ್‌ನಲ್ಲಿ ಪ್ರಜ್ಞಾನಂದ ಕೂಡ ಆಂಟನ್ ಡೆಮ್ಚೆಂಕೊ ಅವರನ್ನು ಮಣಿಸಿದ್ದರಿಂದ ಭಾರತದ ಗೆಲುವಿನ ಅಂತರ 3–0 ಆಯಿತು.
ಎರಡನೇ ಶ್ರೇಯಾಂಕ ಪಡೆದಿದ್ದ ಭಾರತ ಸಂಭವನೀಯ 22 ಪಾಯಿಂಟ್‌ಗಳಲ್ಲಿ 21 ಪಾಯಿಂಟ್ಸ್ ಗಳಿಸಿದ್ದು ಅಮೋಘ ಸಾಧನೆಯೇ ಸರಿ.
ಉಜ್ಬೇಕಿಸ್ತಾನ ಎದುರು ಡ್ರಾ ಮಾಡಿಕೊಂಡಿದ್ದು, ಉಳಿದ 10 ಸುತ್ತಿನಲ್ಲಿ ಭಾರತದ ಆಟಗಾರರು ಜಯಗಳಿಸಿದರು. ಭಾರತ ಪುರುಷರ ತಂಡದ ಪ್ರಾಬಲ್ಯ ಎಷ್ಟರಮಟ್ಟಿಗೆ ಇತ್ತೆಂದರೆ 44 ಪಂದ್ಯಗಳ ಪೈಕಿ ಬರೇ ಒಂದು ಪಂದ್ಯವನ್ನು ಮಾತ್ರ ಸೋತಿತ್ತು. 9ನೇ ಸುತ್ತಿನಲ್ಲಿ ಅಮೆರಿಕದ ವೆಸ್ಲಿ ಸೊ ಎದುರು ಪ್ರಜ್ಞಾನಂದ ಆ ಒಂದು ಪಂದ್ಯ ಸೋತಿದ್ದರು.
ಮಹಿಳೆಯರಿಗೂ ಬಂಗಾರ: ಮಹಿಳಾ ತಂಡದಲ್ಲಿ ಹಾರಿಕಾ ಮೊದಲ ಬೋರ್ಡ್‌ನಲ್ಲಿ ಮಮ್ಮದ್‌ಝಾದಾ ಗುನೇ ಅವರನ್ನು ಮಣಿಸಿದರು. ವೈಶಾಲಿ ಮತ್ತು ಉಲ್ವಿಯಾ ನಡುವಣ ಪಂದ್ಯ ಡ್ರಾ ಆಯಿತು. ಉತ್ತಮ ಲಯದಲ್ಲಿರುವ ದಿವ್ಯಾ ದೇಶಮುಖ್, ಬೆಯ್ದಾಲಯೇವಾ ವಿರುದ್ಧ ಜಯಗಳಿಸಿದರೆ, ಈ ಒಲಿಂಪಿಯಾಡ್‌ನಲ್ಲಿ ಮಿಂಚಿದ ವಂತಿಕಾ ಅಗರವಾಲ್, ಬಾಲಾಜಯೇವಾ ಖಾನಿಮ್ ವಿರುದ್ಧ ಗೆಲುವನ್ನು ದಾಖಲಿಸಿದರು.
ಆನಂದ್ ಅಭಿನಂದನೆ
ಒಲಿಂಪಿಯಾಡ್‌ನಲ್ಲಿ ಮೊದಲ ಸಲ ಚಿನ್ನ ಗೆದ್ದ ಭಾರತ, ಪುರುಷರ ಮತ್ತು ಮಹಿಳಾ ತಂಡಗಳಿಗೆ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ತಂಡಕ್ಕೆ ಅಭಿನಂದನೆಗಳು. ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಅವರ ಪ್ರದರ್ಶನ ಅತ್ಯದ್ಭುತ. ವಿದಿತ್ ಅವರಿಗೂ ಅಭಿನಂದನೆ. ಶ್ರೀನಾಥ್ ನಾರಾಯಣನ್ ಅವರ ನಾಯಕತ್ವವೂ ಅಮೋಘ ಎಂದು ಆನಂದ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಅವರು, ದಿವ್ಯಾ ದೇಶಮುಖ್ ಮತ್ತು ವಂತಿಕಾ ಅಗರವಾಲ್ ಅವರ ಸಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ನಾಲ್ಕು ವೈಯಕ್ತಿಕ ಚಿನ್ನ
ಭಾರತದ ಚೆಸ್‌ಪಟುಗಳು ವೈಯಕ್ತಿಕ ಬೋರ್ಡ್‌ಗಳಲ್ಲಿ ತೋರಿದ ಅತ್ಯುತ್ತಮ ಸಾಧನೆಗೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು. ಓಪನ್ ವಿಭಾಗದಲ್ಲಿ ಗುಕೇಶ್ ಮತ್ತು ಅರ್ಜುನ್, ಮೊದಲ ಮತ್ತು ಮೂರನೇ ಬೋರ್ಡ್‌ನಲ್ಲಿ ಸ್ವರ್ಣ ಗೆದ್ದರು. ಮಹಿಳಾ ವಿಭಾಗದಲ್ಲಿ ದಿವ್ಯಾ ದೇಶಮುಖ್ ಮತ್ತು ವಂತಿಕಾ, ಮೂರು ಮತ್ತು ನಾಲ್ಕನೇ ಬೋರ್ಡ್‌ನ ಆಟಕ್ಕೆ ಚಿನ್ನ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.