ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್ ತಂಡಕ್ಕೆ ಎಎಫ್‌ಸಿ ಒಲಿಂಪಿಕ್ ಅರ್ಹತಾ (ರೌಂಡ್ 2) ಟೂರ್ನಿಯಲ್ಲಿ ಕಠಿಣ ಸವಾಲು ಎದುರಾಗಲಿದೆ.
ಭಾರತ ಅಲ್ಲದೆ ಜಪಾನ್, ವಿಯೆಟ್ನಾಂ ಮತ್ತು ಆತಿಥೇಯ ಉಜ್ಬೆಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ (ಸಿ ಗುಂಪು) ಸ್ಥಾನ ಪಡೆದುಕೊಂಡಿವೆ. ಈ ಟೂರ್ನಿ ಅ.23 ರಿಂದ ನ.1ರ ವರೆಗೆ ನಡೆಯಲಿದೆ.
ಈ ವರ್ಷದ ಆರಂಭದಲ್ಲಿ ಕಿರ್ಗಿಸ್ತಾನ ವಿರುದ್ಧದ ಎರಡು ಲೆಗ್ ಪಂದ್ಯಗಳನ್ನು 5–0 ಮತ್ತು 4–0 ರಲ್ಲಿ ಜಯಿಸುವ ಮೂಲಕ ಭಾರತ ತಂಡವು ರೌಂಡ–2ಗೆ ಅರ್ಹತೆ ಪಡೆದುಕೊಂಡಿತ್ತು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 61ನೇ ಸ್ಥಾನದಲ್ಲಿರುವ ಭಾರತ ತಂಡವು, ‘ಸಿ’ ಗುಂಪಿನಲ್ಲಿ ಅತ್ಯಂತ ಕಡಿಮೆ ರ‍್ಯಾಂಕ್ ಹೊಂದಿರುವ ತಂಡ ಎನಿಸಿದೆ. 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಜಪಾನ್, 11ನೇ ರ‍್ಯಾಂಕ್ ಹೊಂದಿದೆ. ವಿಯೆಟ್ನಾಂ ಮತ್ತು ಉಜ್ಬೆಕಿಸ್ತಾನ ತಂಡಗಳು ಕ್ರಮವಾಗಿ 33 ಹಾಗೂ 50ನೇ ಸ್ಥಾನ ಹೊಂದಿವೆ.
ಭಾರತ ತಂಡವು ಕಿರ್ಗಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಉಜ್ಬೆಕಿಸ್ತಾನ ಎದುರು ಸ್ನೇಹಪರ ಪಂದ್ಯ ಆಡಿತ್ತು. ಆ ಪಂದ್ಯವನ್ನು 2–3 ರಲ್ಲಿ ಸೋತಿತ್ತು.
ಉಜ್ಬೆಕಿಸ್ತಾನ ವಿರುದ್ಧ ಆಡಿರುವ ಮೂರೂ ಪಂದ್ಯಗಳಲ್ಲಿ ಭಾರತಕ್ಕೆ ಒಂದು ಗೋಲು ಅಂತರದ ಸೋಲು ಎದುರಾಗಿತ್ತು. ವಿಯೆಟ್ನಾಂ ತಂಡವನ್ನು 2019 ರಲ್ಲಿ ಕೊನೆಯದಾಗಿ ಎದುರಿಸಿದ್ದಾಗ, 1–1 ರಲ್ಲಿ ಡ್ರಾ ಸಾಧಿಸಿತ್ತು. ಜಪಾನ್ ವಿರುದ್ಧ 1997ರಲ್ಲಿ ಕೊನೆಯದಾಗಿ ಆಡಿತ್ತು. ಅಂದು ನಡೆದಿದ್ದ ಏಷ್ಯಾ ಮಹಿಳಾ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾರತಕ್ಕೆ 0–1 ರಲ್ಲಿ ಸೋಲು ಎದುರಾಗಿತ್ತು.
2024ರ ಒಲಿಂಪಿಕ್ ಕೂಟದ ಮಹಿಳಾ ಫುಟ್‌ಬಾಲ್ ಟೂರ್ನಿಗೆ ಏಷ್ಯಾದಿಂದ ಎರಡು ತಂಡಗಳು ಮಾತ್ರ ಅರ್ಹತೆ ಗಳಿಸಲಿವೆ.
ಎಎಫ್‌ಸಿ 17 ವರ್ಷದೊಳಗಿನವರ ಮಹಿಳೆಯರ ಏಷ್ಯಾ ಕಪ್ ಅರ್ಹತಾ (ರೌಂಡ್ 2) ಟೂರ್ನಿಗೆ ಭಾರತ ತಂಡವು ಕೊರಿಯಾ, ಥಾಯ್ಲೆಂಡ್ ಮತ್ತು ಇರಾನ್ ತಂಡಗಳ ಜತೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಟೂರ್ನಿ ಸೆ.16 ರಿಂದ 24ರ ವರೆಗೆ ನಡೆಯಲಿದ್ದು, ತಾಣವನ್ನು ಇನ್ನೂ ಅಂತಿಮಗೊಳಿಸಿಲ್ಲ.
ಭಾರತ ತಂಡವು ಅರ್ಹತಾ ಹಂತದ ರೌಂಡ್ 1ರ ಪಂದ್ಯಗಳಲ್ಲಿ ಕಿರ್ಗಿಸ್ತಾನ (1–0) ಮತ್ತು ಮ್ಯಾನ್ಮಾರ್ (2–1) ತಂಡಗಳನ್ನು ಮಣಿಸಿ ರೌಂಡ್–2ಗೆ ಅರ್ಹತೆ ಪಡೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.