ನವದೆಹಲಿ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಕ್ರೀಡಾಪಟುಗಳು ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
‘ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 100 ಪದಕಗಳು! ಆನಂದದ ಕ್ಷಣ. ಈ ಯಶಸ್ಸು ನಮ್ಮ ಕ್ರೀಡಾಪಟುಗಳ ಸಂಪೂರ್ಣ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢತೆಯ ಫಲವಾಗಿದೆ. ಈ ಗಮನಾರ್ಹ ಮೈಲಿಗಲ್ಲು ನಮ್ಮ ಹೃದಯದಲ್ಲಿ ಅಪಾರ ಹೆಮ್ಮೆಯನ್ನು ತುಂಬುತ್ತದೆ. ನಮ್ಮ ಕ್ರೀಡಾಪಟುಗಳು, ತರಬೇತುದಾರರಿಗೆ ನಾನು ಮೆಚ್ಚುಗೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಜಯಗಳು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತವೆ. ನಮ್ಮ ಯುವಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಕ್ರೀಡಾಪಟುಗಳ ನೆನಪಿಸುತ್ತಾರೆ ಎಂದು ಮೋದಿ ಕೊಂಡಾಡಿದ್ದಾರೆ.
ಏಷ್ಯನ್ ಕ್ರೀಡಾಕೂಟದಲ್ಲಿ ದಾಖಲೆಯ 107 ಪದಕಗಳನ್ನು ಗೆದ್ದು ಬೀಗಿದ್ದ ಭಾರತ, ಇದೀಗ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ದಾಖಲೆ ಸಂಖ್ಯೆಯಲ್ಲಿ ಪದಕ ಬಾಚಿಕೊಳ್ಳುವ ಮೂಲಕ ಗಮನ ಸೆಳೆದಿದೆ.
ಒಟ್ಟು 313 ಅಥ್ಲೀಟ್‌ಗಳು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದು, ರೋಯಿಂಗ್, ಕೆನೋಯಿಂಗ್, ಲಾನ್‌ಬೌಲ್, ಟೇಕ್ವಾಂಡೊ ಮತ್ತು ಅಂಧರ ಫುಟ್‌ಬಾಲ್ ಸ್ಪರ್ಧೆಗಳಲ್ಲಿ ಇದೇ ಮೊದಲ ಬಾರಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.