ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಎಲ್ಡೊಸ್ ಪಾಲ್ ಅವರು ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡರು. ಈ ವಿಭಾಗದಲ್ಲಿ ಬೆಳ್ಳಿ ಪದಕವೂ ಭಾರತದ ಪಾಲಾಗಿದ್ದು, ಕೇರಳದ ಅಬ್ದುಲ್ಲಾ ಅಬೂಬಕರ್ ಗೆದ್ದುಕೊಂಡಿದ್ದಾರೆ.
ಪಾಲ್ ಅವರು ಮೂರನೇ ಯತ್ನದಲ್ಲಿ 17.03 ಮೀ. ಜಂಪ್ ಮಾಡಿದರೆ, ಅಬೂಬಕರ್ ಅವರು ಐದನೇ ಯತ್ನದಲ್ಲಿ 17.02 ಮೀ. ನೆಗೆದರು.
ಬರ್ಮುಡಾದ ಝಾ–ನಾಲ್ 16.92 ಮೀ. ಜಂಪ್ ಮಾಡುವ ಮೂಲಕ ಕಂಚಿನ ಪದಕ ಗೆದ್ದರು.
ಕಳೆದ ಆವೃತ್ತಿಗಳಲ್ಲಿ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತವು ನಾಲ್ಕು ಪದಕಗಳನ್ನು ಜಯಿಸಿತ್ತು. ಆದರೆ, ದೇಶದ ಇಬ್ಬರು ಅಥ್ಲೀಟ್‌ಗಳು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸೆಣಸಿ ಮೊದಲೆರಡು ಪದಕಗಳನ್ನು ತಮ್ಮದಾಗಿಸಿಕೊಂಡದ್ದು ಇದೇ ಮೊದಲಾಗಿದೆ.
ಮೊಹಿಂದರ್ ಸಿಂಗ್ ಗಿಲ್ ಅವರು 1970 ಮತ್ತು 1974ರಲ್ಲಿ ಕಂಚು ಮತ್ತು ಬೆಳ್ಳಿ ಪದಕ ಗೆದ್ದಿದ್ದರು. 2010 ಮತ್ತು 2014ರ ಆವೃತ್ತಿಗಳಲ್ಲಿ ರಂಜಿತ್ ಮಹೇಶ್ವರಿ ಹಾಗೂ ಅರ್ಪಿಂದರ್ ಸಿಂಗ್ ಮೂರನೇ ಸ್ಥಾನ ಗಳಿಸಿದ್ದರು.
ಉಳಿದಂತೆ, ಭಾನುವಾರ ನಡೆದ ಸ್ಪರ್ಧೆಗಳಲ್ಲಿ ಭಾರತದ ವನಿತೆಯರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಮಹಿಳೆಯರ 48 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ನೀತೂ ಘಂಘಸ್ ಹಾಗೂ ಪುರುಷರ 51 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಘಲ್ ಅವರು ಚಿನ್ನದ ಪದಕ ಜಯಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ಸೆಮಿಫೈನಲ್‌ನಲ್ಲಿ ಗೆಲ್ಲುವ ಮೂಲಕ ಪಿ.ವಿ. ಸಿಂಧು ಅವರು ಫೈನಲ್ ಪ್ರವೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.